ಮಾನವ ನಿರ್ಮಿತ ಪರಿಸರಕ್ಕೆ ಸೇರಿದ್ದು ಕೃಷಿ, ಇಲ್ಲಿ ಬದಲಾವಣೆಗಳು ನಡೆಯುತ್ತಿರುತ್ತವೆ. ಆಧುನಿಕ ಹಾಗೂ ಸಾಂಪ್ರದಾಯಕ ಪದ್ಧತಿಗಳನ್ನು ಕಾಣುತ್ತೇವೆ. ಆಧುನಿಕ ಪದ್ಧತಿ ಸಾಂಪ್ರದಾಯಕ ಪದ್ಧತಿಗೆ ಪರ್ಯಾಯವಾಗಿ ಬಂದುದು. ಸಾಂಪ್ರದಾಯಕ ಕೃಷಿ ಅನುಭವ ಮೂಲದ್ದು. ಆಧುನಿಕ ಪದ್ಧತಿ ಮೂಲದ್ದು. ಈ ಎರಡರ ಮಾತೃಕೆಯೂ ಸಾಗುವಳಿಯೇ. ಸಾಗುವಳಿ ಆಗುತಿದ್ದುದು ಸಾಗುವಳಿದಾರನಿಂದ. ಸಾಗುವಳಿದಾರನೆಂದರೆ ತನಗಾಗಿ ತನ್ನ ಜಮೀನಿನಲ್ಲಿ ದುಡಿಯುವವನು. ಇದು ಕೃಷಿ ಆವರಣದ ತಿಳಿವಳಿಕೆ. ಆವರಣದ ಒಳಗೆ ಸಾಗುವಳಿದಾರರಲ್ಲಿ ವರ್ಗ ವಿಂಗಡಣೆ ಇರುತ್ತದೆ. ಅದು ಸ್ವಂತ ಬೇಸಾಯ, ಗುತ್ತಿಗೆ ಬೇಸಾಯ, ಕೂಲಿಕಾರ ಬೇಸಾಯ, ಜೀತಗಾರ ಬೇಸಾಯ.

ಸ್ವಂತ ಬೇಸಾಯದಲ್ಲಿ ಎಲ್ಲವೂ ಸ್ವಂತವೆ, ಸ್ವತಂತ್ರವಾದುದು. ಗುತ್ತಿಗೆಯಲ್ಲಿ ಹುಟ್ಟುವಳಿ ಗುತ್ತಿಗೆದಾರನದು, ಜಮೀನಲ್ಲ. ಇದಕ್ಕೆ ನಿಗದಿತ ಪಾವತಿ ಇರುತ್ತದೆ. ಕೂಲಿಕಾರ ಬೇಸಾಯದಲ್ಲಿ, ಕೂಲಿಯಷ್ಟೇ ಅವನದು. ಜೀತಗಾರ ಬೇಸಾಯದಲ್ಲಿ ಅಲ್ಪ ಪಾವತಿಯಲ್ಲಿ ದುಡಿಮೆ ನಡೆದು ಹುಟ್ಟುವಳಿ ಭೂ ಮಾಲೀಕನಾಗಿತ್ತು. ಕೂಲಿ ಮತ್ತು ಜೀತದಲ್ಲಿ ಭೂ ಹಿಡುವಳಿದಾರನದೇ ಸ್ವಾಮ್ಯ. ಅವನ ಇಚ್ಛೆಯಂತೆ ಬಿತ್ತನೆ, ಕೊಯ್ಲು, ಕಣ.

ಭೂ ಸುಧಾರಣಾ ಕಾಯಿದೆಗಳು ಬದಲಾವಣೆಗಳನ್ನು ತಂದಂತೆ ಸಂಶೋಧನೆಗಳು ಕೃಷಿಯಲ್ಲಿ ಬದಲಾವಣೆಗಳನ್ನು ತಂದವು. ಇದು ನಿರ್ಬೀಜೀಕರಣದವರೆಗೆ ಬೆಳೆದು ಮುಂದುವರಿದಿದೆ. ಇದರಲ್ಲಿ ಬೀಜ ರಾಜಕಾರಣ, ಸಂಪ್ರದಾಯ ಇಲ್ಲವೆ ನಾಟಿ ಬೀಜ ಸಂಸ್ಕೃತಿಯ ಮೇಲೆ ದಾಳಿಯನ್ನೇ ನಡೆಸಿದೆ. ಈ ದಾಳಿಯ ವ್ಯಾಪ್ತಿ ಹಾಗೂ ಆಕ್ರಮಣಶೀಲತೆಯ ತೀವ್ರತೆ ಎಷ್ಟು ಎಂಬುದಕ್ಕೆ ಬಿ.ಟಿ. ಬದನೆ ವಿರುದ್ಧ ರೈತರಿಂದ ನಡೆದ ಪ್ರತಿಭಟನೆಯೇ ಸಾಕ್ಷಿ. ಸಾಂಪ್ರದಾಯಿಕ ಬೀಜ ಸಂಸ್ಕೃತಿಗೆ ಬೀಜದ ರಾಜಕೀಯ ಶಕ್ತಿ ಇಲ್ಲ. ಎದುರಾಗುವ ಕಲ್ಪನೆಯೇ ಇದಕ್ಕಿರಲಿಲ್ಲ, ಅದಕ್ಕೆ ಪ್ರತಿರೋಧ ಒಡ್ಡುವುದಾಗಲಿಲ್ಲ. ಆದ್ದರಿಂದ ಕುಲಾಂತರಿ ತಳಿಗಳಿಗೆ ದಾರಿ ಸುಗಮವಾಯಿತು.

ಬಂಡವಾಳದಾರರ ಪ್ರವೇಶ ಹಿಂದೆಂದಿಗಿಂತ ಹೆಚ್ಚಾಯಿತು. ಬರಬರುತ್ತ ಇವರು ಕೃಷಿಗೆ ಬಲವಾಗಿ ಬೇರೂರಿದರು. ಇದರ ಪರಿಣಾಮವಾಗಿ ದಲ್ಲಾಳಿ ಹಾಗೂ ಬಂಡವಾಳಿಗರ ಹೊಂದಾಣಿಕೆಯಲ್ಲಿ ಮಾರುಕಟ್ಟೆ ನಿಂತಿತು. ಈ ಆಧುನಿಕ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬೇಸಾಯಗಾರ ಸರಬರಾಜುದಾರನಾದ. ಅಲ್ಲಿಯ ಒಳಮರ್ಮಗಳನ್ನು ತಿಳಿಯುವಲ್ಲಿ ಅಲ್ಲಿಯ ಹಮಾಲಿಗಿಂತ ಹಿಂದುಳಿದಿದೆ. ‘ಬೆಳೆದವ ಬಿಕಾರಿ, ಕೊಂಡವ ಸಾವ್ಕಾರಿ’ ಆದುದು ಹೀಗೆ.

ಕೃಷಿ ಸಂಶೋಧನಾ ರಂಗ ಜನಸಂಖ್ಯೆ, ಬೇಡಿಕೆ(ಅಗತ್ಯ), ಪೂರೈಕೆ ಎಂಬ ವಾದವನ್ನು ಮುಂದಿಟ್ಟು ಇಳುವರಿಯತ್ತ ಒತ್ತು ಕೊಟ್ಟಿತು. ಇದು ವಿರೋಧಾರ್ಹವಲ್ಲ. ಸ್ಥಳೀಯ ಬೇಸಾಯ ಸಂಸ್ಕೃತಿಯನ್ನು ಸ್ಥಾಪಿಸಿ ಬೇಡಿಕೆಯನ್ನು ಸ್ಥಾಪಿಸುವ ಸಾಧ್ಯತೆಯಲ್ಲಿ ಪೂರ್ಣ ಪ್ರಮಾಣದ ಕೆಲಸ ಆಗಿದ್ದರೆ ನೆಲದ ಸಾರ ಮತ್ತು ಮಾಲಿನ್ಯವನ್ನು ತಡೆಯುವ ಅವಕಾಶಗಳು ಇರುತ್ತಿದ್ದವು. ಸಾವಯವ ಗೊಬ್ಬರದ ತಿಪ್ಪೆಗಳು ಮುಚ್ಚಿಹೋಗುವಂತೆ ಮಾಡಿ, ಮೂಟೆ ಗೊಬ್ಬರವನ್ನು ಅನಿವಾರ್ಯಗೊಳಿಸಿದಾಗ ಮಣ್ಣು ವಿಷವಾಯಿತು. ಆಧುನಿಕ ತಳಿಗಳು ರೋಗ ನಿರೋಧಕ ಗುಣಕ್ಕಿಂತ ರೋಗಾಹ್ವಾನಿತ ಗುಣದಿಂದ ಜೀವ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುವ ಕ್ರಿಮಿನಾಶಕಗಳ ಬಳಕೆಗೆ ರಸ್ತೆ ನಿರ್ಮಿಸಿದವು. ಇವುಗಳ ಉತ್ಪಾದನೆ, ವಿತರಣೆ, ಬಳಕೆ ನಿಯಂತ್ರಣವನ್ನು ಮೀರಿ ‘ಕಳಪೆ’ ವಸ್ತುಗಳ ಉತ್ಪಾದನೆಯ ಪೂರೈಕೆಯ ಮೂಲಕ ಲಾಭಕೋರ ದಂಧೆಗೆ ದಾರಿಯಾಯಿತು. ಇದರಿಂದ ರೈತ ನಷ್ಟಕ್ಕೆ, ಕಷ್ಟಕ್ಕೆ ಸಿಕ್ಕಿ ಸಾಲಗಾರನಾದುದಲ್ಲದೆ ಆತ್ಮಹತ್ಯೆಯ ಕಡೆ ಮುಖ ಮಾಡುವಂತಾಯಿತು.

ಇದು ಭಾರತೀಯ ಕೃಷಿ ಇತಿಹಾಸದಲ್ಲಿ ಕಾಣಲಿಲ್ಲ. ಇಲ್ಲಿನ ರೈತ ಕಡುಬರಗಾಲದಲ್ಲಿಯೂ ಧೃತಿಗೆಡಲಿಲ್ಲ, ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೆ, ಹೊಲದ ತುಂಬ ಬೆಳೆ ಬೆಳೆದು ಫಸಲು ಕೈಗೆ ಹತ್ತದೆ, ದುಡಿಮೆ ವ್ಯರ್ಥವಾಗಿ ಭಯ ಹುಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಳೆದ ಶತಮಾನದ ಅಂತ್ಯ ಹಾಗೂ ಈ ಶತಮಾನದ ಆರಂಭದ ಕೃಷಿ ಚರಿತ್ರೆಯ ದುರಂತ ಅಧ್ಯಾಯದ ಮುನ್ನುಡಿ.

ಬಡತನದಲ್ಲಿ ಬದುಕಿದ ಭಾರತೀಯ ರೈತ ಹೊಸ ತಳಿಗಳು ಬಂದಾಗ ಹೆಚ್ಚು ಬೆಳೆಯುವ, ತನ್ನ ದೇಶದ ಜನರಿಗೆ ಉಣಿಸಿ, ತಾನೂ ಆರ್ಥಿಕವಾಗಿ ಸುಧಾರಿಸುವ ಕನಸುಗಳನ್ನು ಕಟ್ಟಿದ. ರೋಗಗಳ ಬೆಳವಣಿಗೆಯನ್ನು ತೋರಿಸಿದರೆ ಮುಂದಿನ ದಿನಗಳಲ್ಲಿ ಪರಿಣಾಮಗಳನ್ನು ತಿಳಿಯುವುದಿಲ್ಲ. ಕೆಟ್ಟ ಪರಿಣಾಮಗಳನ್ನು ಕಂಡಾಗ ಅದರ ಹೊಣೆಯನ್ನು ಸಂಶೋಧನೆಯ ತಲೆಗೆ ವರ್ಗಾಯಿಸಲಾಯಿತು. ಕೇರಳದಲ್ಲಿ ಎಂಡೋಸಲ್ಫಾನ್ ಕ್ರಿಮಿನಾಶಕದ ವಿರುದ್ಧ ಪ್ರತಿಭಟನೆ. ಆಂಧ್ರದ ಕೆಲವು ಹಳ್ಳಿಗಳಲ್ಲಿ ಅಂಗವೈಕಲ್ಯ ಸವಾಲನ್ನು ಒಡ್ಡಿತು. ಬಿ.ಟಿ. ಹತ್ತಿಯು ತಂದ ಅವಾಂತರಗಳನ್ನು ಮರೆಯಲಾಗದು.

ಕೃಷಿಯಲ್ಲಿ ಕ್ರಾಂತಿಗಳಾದವು. ಹಸಿರು ಕ್ರಾಂತಿಯಾಯಿತು, ಶ್ವೇತಕ್ರಾಂತಿಯಾಯಿತು. ಹಸಿರು ಕ್ರಾಂತಿಯ ಬಗ್ಗೆ ಹೆಮ್ಮೆಯಿಂದ ಮಾತಾಡಿದೆ. ಆದರೆ ಸರ್ವೋಚ್ಛ ನ್ಯಾಯಾಲಯ ಹಸಿವೆಯಿಂದ ಸತ್ತ ಮಕ್ಕಳ ಪ್ರಕರಣಗಳಿಂದ ಚಿಂತಿತವಾಗಿ ಮಧ್ಯಾಹ್ನದ ಬಿಸಿಯೂಟ ಜಾರಿಗೆ ಕಾರಣವಾಯಿತು. ಶ್ವೇತಕ್ರಾಂತಿಯಿಂದ ಹಾಲು ಮತ್ತು ಅದರ ಉತ್ಪನ್ನಗಳಲ್ಲಿ ಏರಿಕೆಯಾಯಿತು. ಆದರೆ ಅದು ಅಗ್ಗವಾಗಲಿಲ್ಲ. ಬದಲಿಗೆ ದರವೂ ಏರುತ್ತಿದೆ. ಮೂಲ ಉತ್ಪಾದಕರಿಂದ ಸುಖಪಡಲಿಲ್ಲ. ಏರಿಕೆಯ ಹದಿನಾರಾಣೆಯಲ್ಲಿ ರೈತನಿಗೆ ಸಿಕ್ಕಿದ್ದು ಮೂರು- ನಾಲ್ಕಾಣೆಯಷ್ಟು ಮಾತ್ರ. ಮೇವಿನಿಂದ ಹಿಡಿದು ಹಸುಗಳ ಉತ್ಪನ್ನದ ಬೆಲೆ ತೆರುವುದರಲ್ಲೇ ಬಸವಳಿದ ಹೈನುಗಾರ. ಇಲ್ಲಿ ರೈತಪರ ನಿರ್ಣಯವಿದ್ದಿದ್ದರೆ ಅವನಿಗೆ ಎಂಟು- ಹತ್ತು ಆಣೆಯ ಹಿಸ್ಸೆಯಾದರೂ ಸಿಗಬೇಕಿತ್ತು. ಆದರೆ ಸಿಕ್ಕಿದ್ದು ಸಾಕಷ್ಟು ಬೂಸ, ಹಿಂಡಿ, ಪಶು ಔಷಧಗಳ ಧಾರಣೆಯನ್ನು ಸರಿದೂಗಿಸುವಷ್ಟು ಅಲ್ಲ. ಇವುಗಳಲ್ಲಿ ಒಂದನ್ನು ಸರಿದೂಗಿಸಿಕೊಂಡರೆ ಇನ್ನೊಂದು ಮೈಮೇಲೆ ಬೀಳುತ್ತಿತ್ತು. ‘ಒಂದು ತೂತನ್ನಾದರೆ ಮುಚ್ಚಬಹುದು. ಎಲ್ಲಾ ತೂತುಗಳೇ ಆದರೆ ಯಾವುದನ್ನು ಮುಚ್ಚುವುದು?’ ಎಂಬ ಮಾತು ಅವನ ಅಸಹಾಯಕತೆಗೆ ದನಿಯಾಯಿತು.

ಅನುಕೂಲಸ್ಥ ಶ್ರೀಮಂತ ರೈತರಲ್ಲೂ ಪ್ರಭಾವಶಾಲಿಗಳು ಮಾತ್ರ ಸರಿದೂಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ, ಪ್ರಭಾವ ಬೀರಲಾಗದ ಈ ವರ್ಗದವರು ಕುಗ್ಗಿ ಹೋದರು. ಸಣ್ಣ, ಅತಿಸಣ್ಣ ಬೆಳೆಗಾರರು ಸಾಲದ ಭಾರದಲ್ಲಿ ತಿಣುಕಿದರು. ಈ ಕುಟುಂಬಗಳ ಮಕ್ಕಳು ತಮ್ಮ ಮನೆಗಳಲ್ಲಿ ಹಾಲನ್ನು ನೋಡಿದಷ್ಟೆ, ಕುಡಿಯಲಿಲ್ಲ. ಅನ್ನವನ್ನೂ ತುತ್ತು ಎಣಿಸಿ ತಿನ್ನುವಂತಾಯಿತು. ಆರ್ಥಿಕವಾಗಿ ‘ಮರಳು ಹೋದರೆ ಅಡವಿ (ಅಗ್ಗ), ಕೊಳ್ಳಲು ಹೋದರೆ ಬೆಂಕಿ’ ಇದು ಇವರ ಪಾಲಿನ ಮಾರುಕಟ್ಟೆಯ ಸ್ಥಿತಿ.

ಎತ್ತು ನೇಗಿಲಿದ್ದವನದೆ ಬೇಸಾಯ ಎಂಬ ಕಾಲ ಹೋಗಿ, ಹಣ, ಟ್ರಾಕ್ಟಟರಿದ್ದವನದೆ ಬೇಸಾಯ ಎಂಬ ಸ್ಥಿತಿಗೆ ತಲುಪಿ ನೆಲದ ಬೇಸಾಯ ಹಿಂದಾಗಿ ಜಿರಾಯ್ತಿ ಹಿನ್ನಡೆ ಅನುಭವಿಸಿತು. ಮುಂಗಾರು ಮಳೆಯ ನಂತರ ಒಣಭೂಮಿ ಬೇಸಾಯದ ಪ್ರದೇಶಗಳಲ್ಲಿ ಬಿತ್ತನೆಯಾಗದ ಭೂಮಿಯ ಸಮೀಕ್ಷೆ ನಡೆದರೆ ಈ ಹಿನ್ನಡೆಯ ಚಿತ್ರಣ ಸಿಗುತ್ತದೆ. ಇದಕ್ಕೆ ಕಾರಣ ಅತಿ ಸಣ್ಣ ರೈತ ಬೀಜ, ಗೊಬ್ಬರ, ಕೃಷಿಗೆ ಬೇಕಾದ ಪರಿಕರಗಳಿಗಾಗಿ ಪರಾವಲಂಬಿಯಾದುದು.

ಕೊಂಡು ಮಾಡುವ ಬೇಸಾಯ ಪೂರ್ಣ ಸಾಲದಲ್ಲಿ ಕಟ್ಟಿದ ಮನೆಯ ವಾಸದಂತೆ. ಸಾಲದ ಬಾಧೆಯಲ್ಲಿ ಬಿದ್ದು ನೆಮ್ಮದಿ ಕಳೆದುಕೊಂಡು ಕಡೆಗೆ ಮನೆಯನ್ನೇ ಮಾರಿಕೊಳ್ಳುವಂತಹ ಪರಿಸ್ಥಿತಿಗೆ ಇದೂ ಹತ್ತಿರ. ಭೂಮಿಯನ್ನು ಕಳೆದುಕೊಳ್ಳಲಾಗದೆ, ಸಾಗುವಳಿ ಮಾಡಿ ಪರಿಹಾರವಾಗುವಷ್ಟು ಹುಟ್ಟುವಳಿ ಪಡೆಯಲಾಗದೆ ಸೋಲು ಸಾಲವನ್ನು ಅವಲಂಬಿತ ‘ಪಾಲಿಗೆ ಬಂದ ಪಂಚಾಮೃತ’ ಅನ್ನಿಸಿದರೂ ಈ ಪಂಚಾಮೃತ ಸವಿಯಲ್ಲ, ಕಹಿ.

ಸಾಲ, ವ್ಯಾಪಾರಿಗೆ ಅನುಕೂಲವೇನೊ? ಆದರೆ, ರೈತನಿಗೆ ಹೊರೆ. ಸಾಲದಲ್ಲಿ ರೈತನ ಉದ್ಧಾರವಿಲ್ಲ ಎಂಬುದು ಬಲ್ಲ ಸತ್ಯ. ಆದರೆ, ಸಾಲ ಬೇಸಾಯದಲ್ಲಿ ಬೆರೆತು ಹೋಗಿದೆ. ಸಾಲಗಾರ ರೈತನಿಗೆ ಉಣ್ಣುವುದಕ್ಕೂ ಬರವಿದೆ. ಕೈಗಾರಿಕೆಗಳಿಗೆ ಕೃಷಿಗೆ ಸಿಗುವ ರಿಯಾಯಿತಿಗಳು ಕಡಿಮೆ. ಇದನ್ನು ರೈತನೂ ಬಲ್ಲ. ರೈತನಿಗೆ ಸಾಲವಿರಬಾರದು. ಸಾಲ ಮುಕ್ತ ರೈತ ಸಬಲ, ಸಾಲಗಾರ ರೈತ ದುರ್ಬಲ. ಉಳುಮೆಯಿಂದ ಹಿಡಿದು ಕೊಯ್ಲಿನವರೆಗೆ ಸಾಲವಿರಬಾರದು. ಯಾವುದಾದರೂ ತನ್ನ ಅಗತ್ಯ ಪೂರೈಕೆಯಾಗಿ, ಉಳಿದದ್ದನ್ನು ಮಾರಿ ತೀರಿಸಬಹುದಾದಷ್ಟು ಮಿತಿಯಲ್ಲಿ ಇರಬೇಕು. ಇಲ್ಲವಾದರೆ ಈ ಬೆಳೆಯ ಸಾಲ, ಮುಂದಿನ ಬೆಳೆಯ ಸಾಲದೊಂದಿಗೆ ಸೇರಿ ದೊಡ್ಡ ಸಾಲವಾಗಿ ಕಾಡುತ್ತದೆ. ಅವನು ಉತ್ತು, ಬಿತ್ತಿ, ಬೆಳೆಯುವುದಕ್ಕೆ ಹೊಲಕ್ಕೆ ಹೋಗಬೇಕು. ಉಳುಮೆಯ ಮಧ್ಯದಲ್ಲಿ ನೇಗಿಲನ್ನು ನಿಲ್ಲಿಸಿ ಬಿತ್ತನೆ, ಗೊಬ್ಬರ, ಸಾಲದ ಚಿಂತೆಯಲ್ಲಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕು. ಅದು ರೈತ ಕಲ್ಯಾಣ.

ಮಳೆಯಾಗಿದೆ, ಸಾಕಷ್ಟು ನೀರೂ ಇದೆ. ಆದರೂ ಭೂಮಿ ಬೀಡು ಬಿದ್ದಿದೆಯೆಂದರೆ ರೈತ ಬೇಸಾಯವನ್ನು ಕಳೆದುಕೊಳ್ಳುತ್ತಿದ್ದಾನೆ ಎಂದಷ್ಟೆ ಅಲ್ಲ, ಬೇಸಾಯದೊಂದಿಗೆ ಬೆಳೆಯನ್ನೂ ಕಳೆದುಕೊಳ್ಳುತ್ತಿರುತ್ತಾನೆ. ಉದಾಹರಣೆಗೆ; ರಾಗಿ ಬಿತ್ತನೆ ಮಾಡಬೇಕು. ಆಗಲಿಲ್ಲ. ಹುರುಳಿ ಬಿತ್ತನೆ ಮಾಡುತ್ತಾನೆ. ಆಗ ರಾಗಿ ಬೆಳೆಯನ್ನು ಆ ವರ್ಷ ಕಳೆದುಕೊಂಡ. ಹುರುಳಿ ರಾಗಿಯಂತೆ ನಿತ್ಯ ಬಳಕೆಯದಲ್ಲ. ಅದನ್ನು ಮಾರಿ ರಾಗಿಯನ್ನು ಕೊಂಡುಕೊಳ್ಳಬಹುದೆಂದರೂ ಅವನ ಅವಶ್ಯಕತೆ ಇದ್ದಷ್ಟು ರಾಗಿ ಆ ಹುರುಳಿಯನ್ನು ಮಾರಿದ ಹಣದಿಂದ ಸಿಗಬೇಕು. ಅವನು ಮಾರುವಾಗ ಅಷ್ಟು ಬೆಲೆ ಅದಕ್ಕಿರಬೇಕು. ದಿನದ ಊಟಕ್ಕೆ ತೊಂದರೆ ಇರುವಾಗ ಹುರುಳಿಗೆ ಬೆಲೆ ಸಿಗುವವರೆಗೆ ಕಾದು ಮಾರುವುದಾಗದು. ಈ ಪರಿಸ್ಥಿಯ ಲಾಭವನ್ನು ಕೃಷಿ ವಲಯದ ವರ್ತಕ, ದಲ್ಲಾಳಿ ವರ್ಗ ಪಡೆದುಕೊಳ್ಳುತ್ತದೆ. ಏಕೆಂದರೆ ಅವರವರ ಲಾಭದ ಚಿಂತನೆ ಅವರವರದು. ರೈತರೊಬ್ಬರ ‘ತಾತನ ಕಾಲದಿಂದ ಆರಂಭ(ಬೇಸಾಯ) ಮಾಡುತ್ತಿದ್ದರೂ ಒಂದು ಸೈಕಲ್ಲು ಕೊಳ್ಳೋದಾಗಿಲ್ಲ. ಐದು ವರ್ಷದ ಹಿಂದೆ ವ್ಯಾಪಾರಕ್ಕಿಳಿದೋನು ಮನೆ ಕಟ್ಟಿಸಿ ಕಾರಿನಲ್ಲಿ ಓಡಾಡುತ್ತಾನೆ’ ಎಂದ ಮಾತು ಈ ವ್ಯವಸ್ಥೆಗೆ ಹಿಡಿದ ಕನ್ನಡಿ.

ಇದಕ್ಕೆ ಹೊರಗಿನದೆಲ್ಲವೂ ಸೇರಿದಂತೆ ರೈತನೂ ಅವನದೇ ರೀತಿಯಲ್ಲಿ ಕಾರಣ ಅನ್ನುವಾಗ ನೋವಾಗುತ್ತದೆ. ತತ್ಕಾಲದ, ತಾತ್ಕಾಲಿಕವಾದ ಅನುಕೂಲಕ್ಕೆ ಮನಸೋತಿದ್ದು ಒಂದು ರೀತಿಯ ಸೋಲು. ಛಿದ್ರವಾದ ರೈತ ಸಮುದಾಯದ ಒಗ್ಗಟ್ಟು, ಸಮುದಾಯದ ಒಳಿತಿನಿಂದ ದೂರ ಸರಿದು ತನಗೆ ಅನುಕೂಲವಾದರೆ ಸಾಕು ಎಂಬ ವೈಯಕ್ತಿಕ ನೆಲೆಗೆ ತಂದು ನಿಲ್ಲಿಸಿದೆ. ಈ ಅಪಾಯದ ಅರಿವು ರೈತನಿಗಿರಬೇಕು. ಕೃಷಿ ಸಮುದಾಯದ ಒಳಿತನ್ನು ಪಡೆಯುವ ಒತ್ತಡ ತರುವ ರಾಜಕೀಯ ಶಕ್ತಿಯನ್ನು ಗಳಿಸಬೇಕು. ಇದಾಗದಿರುವುದು ಇಲ್ಲಿರುವ ವಿಷಾದ.

‘ತೃಣಮಪಿ ನ ಚಲತಿ ರಾಜಕೀಯ ವಿನಾ’ ಎಂದಾಗಿರುವ ಈ ದಿನಗಳಲ್ಲಿ ರೈತರು ಕೈಗಾರಿಕೋದ್ಯಮಿಗಳಿಂದ ಕಲಿಯಬೇಕಾದ ಪಾಠ ಬಹಳವಿದೆ. ಅವರಂತೆ ಪಡೆದುಕೊಳ್ಳುವ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಜಾತಿಗಳಾಗಿ ಒಡೆದು ಹಂಚಿಕೊಂಡಿರುವ ಶಕ್ತಿಯನ್ನು ರೈತ ಸಮುದಾಯ ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಬೇಕು. ರೈತ ಸಮುದಾಯವೆಂದರೆ ಅವರ ನೆಲದಲ್ಲಿ ದುಡಿವ ಕೂಲಿಕಾರರೂ ಸೇರಿರುತ್ತಾರೆ. ಇದೊಂದು ಸಂಘಟನೆಯಾಗಿ ಅರ್ಥಶಾಸ್ತ್ರದ ಪರಿಭಾಷೆಯಂತೆ ಹೂಡಿಕೆ, ಸವಕಳಿ ಕಳೆದು ನಿವ್ವಳ ಲಾಭ ಸಿಗುವ ವ್ಯವಸ್ಥೆ ನಿರ್ಮಿಸುವಷ್ಟು ಗಟ್ಟಿಯಾಗಿ ಬೆಳೆಯಬೇಕು. ಇದರ ಮೂಲಕ ಕೊಳ್ಳುವ ಬೆಲೆಗೂ, ಉತ್ಪಾದಕ ಮಾರುವ ಬೆಲೆಗೂ ನಡುವೆ ಕೊಬ್ಬಿರುವ ವಿತರಣಾ (ಮಾರುಕಟ್ಟೆಯ ವ್ಯಾಪಾರಿ ಲಾಭದ) ಬೆಲೆಗೂ ನಡುವೆ ಈಗಿರುವಂತಹ ಅಂತರವನ್ನು ಕುಗ್ಗಿಸಬೇಕು.

ರೈತನಿಗೆ ಸಿಗಬೇಕಿರುವುದು ಸಾಲದ ಬೆಂಬಲ ಬೆಲೆಯಲ್ಲ. ಮಾರುಕಟ್ಟೆಯ ದರದಂತೆ ಅವನ ಉತ್ಪನ್ನಕ್ಕೆ ತಕ್ಕ ಬೆಲೆ. ಹಾಗೆಯೇ ಗ್ರಾಹಕನಿಗೆ ನ್ಯಾಯಬೆಲೆ. ಈ ಇಬ್ಬರೂ ಲಾಭಕೋರ ವ್ಯಾಪಾರಿಯ ಶೋಷಣೆಯಿಂದ ಮುಕ್ತರಾಗಬೇಕು. ಕೃಷಿ ಉತ್ಪಾದಕ ವರ್ಗ, ಅವನ ಉತ್ಪಾದನೆಯ ಉಪಭೋಗಿಯಾದ ಗ್ರಾಹಕ ವರ್ಗ, ಈ ಎರಡರ ನಡುವೆ ಇರುವ ವಿತರಕ (ವ್ಯಾಪಾರಿ) ವರ್ಗವನ್ನು ಸಹಕಾರ ವ್ಯವಸ್ಥೆಯಡಿಗೆ ತರಬೇಕು. ಹೀಗಾಗುತ್ತಿರುವಾಗಲೇ ದಿನೇದಿನೆ ಕುಗ್ಗುತ್ತಿರುವ ತುಂಡು ಭೂಮಿ ಬೇಸಾಯವನ್ನು ಪುನರುಜ್ಜೀವನಗೊಳಿಸಿ, ಉಳಿಸಬೇಕು ಮತ್ತು ಅದು ನಶಿಸದಂತೆ ಕಾರ್ಯಕ್ರಮ ರೂಪಿಸಬೇಕು. ತುಂಡು ಭೂಮಿ ಬೇಸಾಯದ ಅಭಿವೃದ್ಧಿ ಕೃಷಿ ನಿರುದ್ಯೋಗವನ್ನು ತಡೆಯುತ್ತದೆ. ಕೃಷಿ ವಲಯದ ವಲಸೆ ನಿಲ್ಲುತ್ತದೆ.

ಹಳ್ಳೀಕಾರ್ ದನಕರುಗಳು ನಮ್ಮ ಭೂ ಪರಿಸರದ ಬೇಸಾಯಕ್ಕೆ ತಕ್ಕ ತಳಿಗಳು. ಇದು ಶತಮಾನಗಳ ಅನುಭವ. ಆದರೆ ಇಂದು ಇವುಗಳ ಸಂತತಿ ಗಣನೀಯವಾಗಿ ಕುಗ್ಗುತ್ತಿದೆ. ಇದರ ಚಿತ್ರಣ ಸಿಗುವುದು ದನಗಳ ಜಾತ್ರೆಗಳಲ್ಲಿ ಹಾಗೂ ಮಂದೆಯಾಗಿ ಮೇಯಲು ಅಟ್ಟಿದಾಗ. ಈ ಹತ್ತು ವರ್ಷಗಳ ಜಾನುವಾರು ಗಣತಿಯನ್ನು ವರ್ಷವಾರು ತಾಳೆ ನೋಡಿದಾಗ ಸಿಗುವ ಅಂಕಿ- ಅಂಶಗಳು ಇದರ ಇಳಿಮುಖದ ತೀವ್ರತೆಯನ್ನು ಸಾರುತ್ತವೆ. ನಾಟಿ ತಳಿಗಳನ್ನು ದೂರ ಮಾಡಿಕೊಳ್ಳುತ್ತಿರುವುದೂ ತುಂಡು ನೆಲದ ಬೇಸಾಯದ ಕ್ಷೀಣತೆಗೆ ಇರುವ ಕಾರಣಗಳಲ್ಲಿ ಒಂದು. ಇದರ ಪುನರಾಭಿವೃದ್ಧಿಗೆ ಗೋಮಾಳಗಳನ್ನು ಗುರುತಿಸಿ ಒತ್ತುವರಿಗಳನ್ನು ತೆರೆವು ಮಾಡುವುದು, ಗುಂಡು ತೋಪುಗಳನ್ನು ಇದೇ ಕ್ರಮದಲ್ಲಿ ಬಿಡಿಸಿ ಅಭಿವೃದ್ಧಿಪಡಿಸುವುದು, ಇವನ್ನು ‘ರಕ್ಷಿತ ಇಲ್ಲವೆ ಕಾಯ್ದಿರಿಸಿದ ಸ್ಥಳ’ವೆಂದು ಘೋಷಿಸುವುದು ತುರ್ತಿನದಾಗಿದೆ.

ಈ ದಿನಗಳು ಸಾವಯವ ಕೃಷಿ ಮರುಕಳಿಕೆಗೆ ಹದಗೊಳ್ಳುತ್ತಿವೆ. ಒಬ್ಬೊಬ್ಬರಾಗಿ ಈ ಪದ್ಧತಿಯತ್ತ ಒಲವು ತಳೆದು ಕೈಗೆತ್ತಿಕೊಳ್ಳುತ್ತಿದ್ದಾರೆ. ಇದು ಬಲಿಯಲು ಬೆಂಬಲ ಮತ್ತು ಪ್ರೋತ್ಸಾಹ ಅಗತ್ಯ. ಗೊಬ್ಬರ ಮತ್ತು ಬೀಜ ಉತ್ಪಾದನೆಯಲ್ಲಿ ರೈತರು ಸ್ವಾವಲಂಬಿಗಳಾಗಲು ಸಾಲದ ಹೊರತಾದ ಬೆಂಬಲವನ್ನು ಮುಕ್ತವಾಗಿ ಕೊಡಬೇಕು. ಈ ಮೂಲಕವೇ ಉತ್ಪಾದನೆಯನ್ನು ಹೆಚ್ಚಿಸಬೇಕು. ಮೇವಿನ ಬ್ಯಾಂಕುಗಳೆನಿಸಿರುವ ಅರಳಿ, ಹೆಬ್ಬೇವು, ಸುಬಾಬುಲ್, ಅತ್ತಿ ಮುಂತಾದವುಗಳಲ್ಲಿರುವ ಗುಂಡುತೋಪು, ಗೋಮಾಳಗಳಲ್ಲಿ ಹಸುರುಗಟ್ಟಬೇಕು. ಅವು ಬೆಳೆದು ಬಳಸಿಯೂ ನಾಶವಾಗುವುದೂ ಅನ್ನದಂತೆ ಅವುಗಳ ಮೇಲೆ ದೋಟಿ, ಮಚ್ಚುಗಳ ಪ್ರಯೋಗವಾಗಬಾರದು. ಇದು ಕಾಲಾವಕಾಶದಲ್ಲಿ, ಅಂದರೆ ನಾಲ್ಕೈದು ವರ್ಷಗಳಲ್ಲಿ ಆಗುವಂಥ ಬೆಳವಣಿಗೆ. ಆವರೆಗೆ ಕುತ್ತು ಬರದಂತಹ ವ್ಯವಸ್ಥೆಯಾಗುವುದು ಮುಖ್ಯ. ಈ ಪ್ರಯತ್ನಗಳ ಹಿಂದೆ ಇದ್ದಂತೆ ಕೆರೆಕಟ್ಟೆಗಳಲ್ಲಿ ಮೇವು ಬೆಳೆಯುವಂತೆ ಮಾಡಬೇಕು. ಗುಂಡುತೋಪು ಮತ್ತು ಗೋಮಾಳಗಳಲ್ಲಿ ಮೇವು ಬೆಳೆಯುವವರೆಗೆ ಒಂದಷ್ಟು ಜಮೀನು ಮೇವಿಗೆ ಮೀಸಲಿಡುವುದು ಭವಿಷ್ಯದಲ್ಲಿ ಮೇವಿನ ಸಮೃದ್ಧಿಗೆ ಅವಕಾಶ. ಇದು ರೈತರ ಸಹಕಾರದಿಂದ ಆಗುವುದು. ಮನಸ್ಸಿದ್ದರೆ ಮಾರ್ಗ ಎಂಬುದು ಜಪವಾದಾಗ ಇದು ಸಾಧ್ಯ.

 

ನೆಲೆ ಕಳೆದುಕೊಂಡ ವನ್ಯಜೀವಿಗಳು ಹೊಲ-ಗದ್ದೆ- ತೋಟಗಳತ್ತ ನುಗ್ಗಿ ಬರತೊಡಗಿವೆ. ಹೀಗೆ ಬರುವ ನಿಷ್ಪಾಪಿ ಜೀವಿಗಳು ತಮ್ಮ ಜೀವಕ್ಕೇ ಕುತ್ತು ತಂದುಕೊಳ್ಳುತ್ತಿವೆ. ಇದು ರೈತರ ಸಮಸ್ಯೆಗಳಲ್ಲಿ ಒಂದಾಗಿ ಪರಿಣಮಿಸಿದೆ. ಮಾನವ ಅವುಗಳ ಜೀವಾವಾಸಕ್ಕೆ ತನ್ನ ವಿನಾಶಕಾರಿ ಸ್ವಾರ್ಥದಿಂದ ದಾಳಿ ಮಾಡುತ್ತಾನೆ. ಕೃತ್ಯ ಇವನದು, ದುಷ್ಫಲ ಅವುಗಳದು. ಕೋತಿಗಳ ಕಾಟ ಹಲವಾರು ಹಳ್ಳಿಗಳನ್ನು ಕಾಡುತ್ತಿದೆ. ಅವು ತಮ್ಮ ಅನ್ನಕ್ಕಾಗಿ ಜಿದ್ದಿಗೆ ಬಿದ್ದು ಮಾನವ ವಸತಿಗಳಿಗೆ ಲಗ್ಗೆ ಇಡುತ್ತಿವೆ. ಒಂದು ಕಾಲದಲ್ಲಿ ನಾಯಿಗಳಿಗೆ ಹೆದರಿ ಓಡುತ್ತಿದ್ದವು. ಇಂದು ಅವುಗಳನ್ನೇ ಹೆದರಿಸಿ ಓಡಿಸುವ ಶಕ್ತಿಯನ್ನು ಬೆಳೆಸಿಕೊಂಡಿವೆ. ಇವುಗಳ ಪ್ರಾಕೃತಿಕ ನೆಲೆಗಳೂ ನಮ್ಮಿಂದ ನಾಶವಾಗುತ್ತಿವೆ. ಇದನ್ನೂ ಪರಿಹರಿಸುವ ಮಾರ್ಗೋಪಾಯಗಳನ್ನು ಕಂಡುಕೊಂಡು ಬೆಳೆಗಳನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ.

ಸವಾಲುಗಳು ಸಾಲು- ಸಾಲು. ಎದುರಿಸಿ ಉಳಿದು, ಪರಿಸರದ ಜೀವ ಸಂಕುಲವನ್ನು ಉಳಿಸಬೇಕು. ಇದು ಸಾಧ್ಯವಾಗುವುದು ನಮ್ಮಿಂದಲೇ. ಪ್ರಾಣಿ, ಪಕ್ಷಿಗಳಿಗೆ ಈ ಶಕ್ತಿಯಿಲ್ಲ. ಅದಿರುವ ನಾವು ಅವರ ನೆಲೆಗಳಿಂದ ಸರಿಯಬೇಕು. ತಮ್ಮ ನೆಲೆಗಳು ತಮಗೆ ಸಿಕ್ಕಾಗ ಅವು ನಮ್ಮ ನೆಲೆಗಳತ್ತ ತಿರುಗಿಯೂ ನೋಡಲಾರವು. ನಮ್ಮ ಹಾಗೂ ಅವರ ಪುನರ್ವಸತಿಯ ಶಕ್ತಿ ಮತ್ತು ವಿವೇಕ ನಮಗಿದ್ದು ಮಾಡದೇ ಇರುವುದು ನಮ್ಮ ಅಪರಾಧ.

ಭಯ ತಪ್ಪುಗಳನ್ನಷ್ಟೇ ಮಾಡಿಸುವುದಿಲ್ಲ. ಆಕ್ರಮಣವನ್ನೂ ಕಲಿಸುತ್ತದೆ. ಇದು ವಿಸ್ತರಿಸಿದರೆ ನಮ್ಮಿಂದಲೇ ಆಪತ್ತುಗಳು, ವಿನಾಶಗಳು ಸೃಷ್ಟಿಯಾಗುತ್ತವೆ. ಇದರಿಂದ ನಮಗೂ ಪರಿಸರಕ್ಕೂ, ಅಲ್ಲಿ ನೆಲೆ ಪಡೆವ ಜೀವಿಗಳಿಗೂ ಸಂಕಟ ತಪ್ಪದು. ಆದುದರಿಂದ ಭಯವನ್ನು ನೀಗಿಕೊಳ್ಳುವ ಕೆಲಸ ನಮ್ಮಿಂದಲೇ ಆಗಬೇಕು. ಕಾಲಿನ ಮೇಲೆ ಕಲ್ಲು ಹಾಕಿಕೊಂಡು ನಮ್ಮ ಪ್ರಾರಬ್ಧ ಅಂದುಕೊಳ್ಳಬಾರದು. ‘ಕೆಡಿಸಬೇಡ, ಕೆಟ್ಟೀಯ’ ಅನ್ನುವುದು ಜಾಗೃತ ವಸ್ತುದಲ್ಲಿರಬೇಕು.

‘ಯೋಗಕ್ಷೇಮ’ ಎಂಬುದು ಮಾನವನಿಗಷ್ಟೇ ಮೀಸಲಾದದ್ದು. ಯೋಗಕ್ಷೇಮ ಎಲ್ಲರದೂ ಎಲ್ಲವುಗಳದೂ ಆಗಿರುತ್ತದೆ. ಇದನ್ನು ಅರಿಯುವುದು ಜಗದ ಅಭಿವೃದ್ಧಿಯ ಆದರ್ಶ ಹಾಗೂ ಮಾರ್ಗ. ಇದನ್ನುಹಿ ಡಿದಾಗ ಭಯವಿರದು. ಭಯ ಮುಕ್ತವಾದಾಗ ಪ್ರಗತಿ.

 

 

Leave a Reply

Your email address will not be published. Required fields are marked *