ಕರಾಚಿ (ಪಾಕಿಸ್ತಾನ): ಬಲೂಚಿಸ್ತಾನ ಪ್ರಾಂತ್ಯದಲ್ಲಿ 9 ಬಸ್ ಪ್ರಯಾಣಿಕರು ಸೇರಿದಂತೆ 11 ಜನರನ್ನು ಉಗ್ರರು ಹತ್ಯೆಗೈದಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.ಮೊದಲ ಘಟನೆಯಲ್ಲಿ, ಶಸ್ತ್ರಸಜ್ಜಿತ ವ್ಯಕ್ತಿಗಳು ನೋಶ್ಕಿ ಜಿಲ್ಲೆಯ ಹೆದ್ದಾರಿಯಲ್ಲಿ ಬಸ್ ಅನ್ನು ನಿಲ್ಲಿಸಿ, ಬಂದೂಕು ತೋರಿಸಿ 9 ಜನರನ್ನು ಅಪಹರಿಸಿದ್ದಾರೆ.
ಈ 9 ಜನರ ಮೃತ ದೇಹಗಳು ಸೇತುವೆಯ ಸಮೀಪದ ಪರ್ವತ ಪ್ರದೇಶದಲ್ಲಿ ಪತ್ತೆಯಾಗಿವೆ. ಅವರ ದೇಹಗಳ ಮೇಲೆ ಗುಂಡಿನ ಗಾಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ವೆಟ್ಟಾದಿಂದ ತಫ್ತಾನ್‌ಗೆ ಹೋಗುತ್ತಿದ್ದಾಗ ಬಸ್ ಅನ್ನು ತಡೆದ ಉಗ್ರರು, ಬಂದೂಕು ತೋರಿಸಿ 9 ಜನರನ್ನು ಪರ್ವತ ಪ್ರದೇಶಗಳಿಗೆ ಕರೆದೊಯ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ಅದೇ ಹೆದ್ದಾರಿಯಲ್ಲಿ ಕಾರಿನ ಮೇಲೆ ಗುಂಡು ಹಾರಿಸಲಾಗಿದ್ದು, ಇಬ್ಬರು ಪ್ರಯಾಣಿಕರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ‘ನೋಶ್ಕಿ ಹೆದ್ದಾರಿಯಲ್ಲಿ 11 ಜನರನ್ನು ಹತ್ಯೆಗೈದ ಭಯೋತ್ಪಾದಕರನ್ನು ಕ್ಷಮಿಸುವುದಿಲ್ಲ. ಶೀಘ್ರದಲ್ಲೇ ಅವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಬಲೂಚಿಸ್ತಾನದ ಮುಖ್ಯಮಂತ್ರಿ ಮಿರ್ ಸರ್ಫರಾಜ್ ಬುಗ್ತಿ ಹೇಳಿದ್ದಾರೆ. ಬಲೂಚಿಸ್ತಾನದಲ್ಲಿ ಶಾಂತಿಯನ್ನು ಕದಡುವುದು ಅವರ ಗುರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೃಹ ಸಚಿವ ಮೊಹ್ಸಿನ್ ನಖ್ವಿ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಮೃತರ ಕುಟುಂಬದವರ ಜೊತೆಗೆ ಸರ್ಕಾರ ನಿಂತಿದೆ ಎಂದಿದ್ದಾರೆ.