ಮುಂಬೈ,- ಹಸ್ತ ನೋಡಿ ನಿಮ್ಮ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವುದಾಗಿ ಗುತ್ತಿಗೆ ನೌಕರನಿಗೆ ಶಾಸ್ತ್ರ ಹೇಳಿದ ಜ್ಯೋತಿಷ್ಯಾ ದಂಪತಿ, ಆತನ ಮನೆಗೆ ಬಂದು 6 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಮಂಗಮಾಯ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೃಹನ್ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಬಿಎಂಸಿ)ನ ಗುತ್ತಿಗೆದಾರನ ಅಂಗೈ ನೋಡುವ ಮೂಲಕ ಭವಿಷ್ಯ ಹೇಳಿದ ಈ ಜ್ಯೋತಿಷಿಗಳು ಕೆಟ್ಟ ಶಕ್ತಿಯನ್ನು ದೂರವಿಡುವ ನೆಪದಲ್ಲಿ ಆತನ ಮನೆಗೆ ಪ್ರವೇಶಿಸಿ, ವಿಶೇಷ ಪೂಜೆ, ವ್ರತಾಚರಣೆ ಎಂದ್ಹೇಳಿ ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎಂದು ಗುತ್ತಿಗೆದಾರ ಆಂಟೊಪ್ ಹಿಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವ್ಯಕ್ತಿ ತನ್ನ ಮಕ್ಕಳಿಗೆ ಕೆಲವು ಸಿಹಿತಿಂಡಿಗಳನ್ನು ಖರೀದಿಸಲು ಪರೇಲ್ನಲ್ಲಿರುವ ಅಂಗಡಿಗೆ ಹೋಗಿದ್ದಾಗ ಈ ನಕಲಿ ಜ್ಯೋತಿಷಿ ದಂಪತಿಗಳು ಅವನ ಬಳಿಗೆ ನಡೆದು 30 ರೂ.ಗೆ ಶಾಸ್ತ್ರ ಹೇಳುವುದಾಗಿ ತಿಳಿಸಿದ್ದಾರೆ. ಮೊತ್ತವು ತುಂಬಾ ಅಗ್ಗವಾದ ಕಾರಣ ದೂರುದಾರರು ತಮ್ಮ ಅಂಗೈ ತೋರಿಸಿ ಭವಿಷ್ಯ ಕೇಳಿದ್ದಾರೆ.
ಶಾಸ್ತ್ರ ಹೇಳಲು ಶುರುವಿಟ್ಟುಕೊಂಡು ದಂಪತಿ, ಕಷ್ಟಪಟ್ಟು ಕೆಲಸ ಮಾಡಿದರೂ ಅದಕ್ಕೆ ತಕ್ಕ ಹಣ ಪಡೆಯುತ್ತಿಲ್ಲ ಎಂದಿದ್ದಾರೆ. ನಿಜ ಎಂದು ಒಪಿಕೊಂಡು ಗುತ್ತಿಗೆದಾರ ಪರಿಸ್ಥಿತಿ ಸುಧಾರಿಸಲು ಏನು ಮಾಡಬೇಕೆಂದು ಕೇಳಿದ್ದಾರೆ. ನಿಮ್ಮಲ್ಲಿನ ಕೆಟ್ಟ ಶಕ್ತಿಯನ್ನು ಹೊರಹಾಕಲು ಧಾರ್ಮಿಕ ಪೂಜೆಯೊಂದನ್ನು ಮಾಡಬೇಕು. ಅದಕ್ಕೆ 1,500 ರೂ. ತಗಲುತ್ತದೆ ಎಂದು ಹೇಳಿದ್ದಾರೆ.
ನಂತರ ಗುತ್ತಿಗೆದಾರ ನಕಲಿ ಜ್ಯೋತಿಷಿ ದಂಪತಿಯನ್ನು ತನ್ನ ಮನೆಗೆ ಆಹ್ವಾನಿಸಿದ್ದು, ಅಲ್ಲಿ ಅವರು ಧಾರ್ಮಿಕ ಕ್ರಿಯೆ ನಡೆಸಿದ್ದಾರೆ. ಜ್ಯೋತಿಷಿ ದಂಪತಿಗಳು ಧಾರ್ಮಿಕ ಕ್ರಿಯೆಗಳನ್ನು ಮಾಡಲು ಗುತ್ತಿಗೆದಾರನ ಮನೆಗೆ ಮೂರು ಬಾರಿ ಭೇಟಿ ನೀಡಿದ್ದಾರೆ.
ಮತ್ತೆ ಗುತ್ತಿಗೆದಾರನ ಮನೆಗೆ ಬಂದ ಜ್ಯೋತಿಷಿ ದಂಪತಿ, ಈ ಬಾರಿ ತಮ್ಮ ಪೂಜೆ ಮುಗಿಯುವವರೆಗೂ ಮನೆಯಿಂದ ಹೊರಗಿರುವಂತೆ ಹೇಳಿದ್ದಾರೆ. ಅದರಂತೆ ಗುತ್ತಿಗೆ ನೌಕರ ಅಪಾರ್ಟ್ಮೆಂಟ್ನ ನೆಲ ಮಹಡಿಗೆ ಬಂದು ಕುಳಿತಿದ್ದಾರೆ.
ಈ ವೇಳೆ ಜ್ಯೋತಿಷಿ ಗುತ್ತಿಗೆದಾರನ ಹೆಂಡತಿಗೆ ಅವಳ ಬಳಿ ಇರುವ ಆಭರಣವನ್ನು ಪಡೆದುಕೊಳ್ಳುವಂತೆ ಕೇಳಿದ್ದಾರೆ. ಆಕೆ ಆಭರಣವನ್ನು ಒಂದು ತುಂಡು ಬಟ್ಟೆಯಲ್ಲಿ ಸುತ್ತಿ ಗಂಟು ಹಾಕಿ ಕೊಟ್ಟಿದ್ದಾರೆ. ಒಂಬತ್ತು ದಿನಗಳವರೆಗೂ ಈ ಗಂಟನ್ನು ತೆರೆಯಬಾರದೆಂದು ಹೇಳಿ ಅಲ್ಲಿಂದ ಹೊರಟುಹೋಗಿದ್ದಾರೆ.
ದೂರುದಾರರು ವಾಪಸ್ ಬಂದು ಗಂಟು ಕಟ್ಟಿದ ಬುತ್ತಿಯ ಬಗ್ಗೆ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಏನೋ ತಪ್ಪಾಗಿದೆ ಗಂಟು ಬಿಚ್ಚಿ ನೋಡಿದಾಗ ಬುತ್ತಿಯಲ್ಲಿ ಚಿನ್ನಾಭರಣ ಇರಲಿಲ್ಲ. ಆನಂತರ ಅವರು ಆ ಜ್ಯೋತಿಷಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಆತನ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ನಂತರ ಪೊಲೀಸರಿಗೆ ಹೋಗಿ ದೂರು ದಾಖಲಿಸಿದ್ದಾರೆ.
ಎನ್ಎಂ ಜೋಶಿ ಠಾಣೆ ಪೊಲೀಸರು ವಂಚನೆ ಮತ್ತು ಕ್ರಿಮಿನಲ್ ನಂಬಿಕೆ ದ್ರೋಹ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ. ಜ್ಯೋತಿಷಿಗಳನ್ನು ಗುರುತಿಸಲು ಅಪಾರ್ಟ್ಮೆಂಟ್ ಮತ್ತು ಪಕ್ಕದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.