ಬೆಂಗಳೂರು : ಅನುಮತಿ ಇಲ್ಲದ ಸ್ಥಳದಲ್ಲಿ ವಿಡಿಯೋ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಖ್ಯಾತ ಯೂಟ್ಯೂಬರ್‌ಅನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಯಲಹಂಕ ಮೂಲದ ಯೂಟ್ಯೂಬರ್ ವಿಕಾಸ್ ಗೌಡ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿ ವಿಕಾಸ ಗೌಡ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇನಲ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಅಲ್ಲದೇ ‘ಟಿಕೆಟ್ ಇಲ್ಲದೆ ಒಳಗಡೆ ಬಂದಿದ್ದೇನೆ, 24 ಗಂಟೆ ರನ್ ವೇ ಬಳಿಯೇ ಇದ್ದೆ. ಎಲ್ಲ ಅಧಿಕಾರಿಗಳ, ಸಿಬ್ಬಂದಿ ಕಣ್ಣುತಪ್ಪಿಸಿ ವಿಮಾನ ನಿಲ್ದಾಣದ ಒಳಗೆ ಪ್ರವೇಶ ಮಾಡಿ, ವಿಡಿಯೋ ಮಾಡಿದ್ದೇನೆ’ ಎಂದು ಹೇಳಿದ್ದನು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋವನ್ನು ನೋಡಿದ ಸಿಐಎಸ್ಎಫ್ ಅಧಿಕಾರಿಗಳು ವಿಕಾಸಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ವಿಕಾಸ ಗೌಡ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಪಡೆದಿದ್ದನು. ಟಿಕೆಟ್ ಪಡೆದು ಟ್ರಾವೆಲ್ ಮಾಡದೇ ರನ್ ವೇಯಲ್ಲಿ ಉಳಿದುಕೊಂಡಿದ್ದನು. ಸುಮಾರು ನಾಲ್ಕೈದು ಗಂಟೆಗಳ ಕಾಲ ಉಳಿದುಕೊಂಡಿದ್ದನು. ನಂತರ ಅಲ್ಲಿಯೇ ವಿಡಿಯೋ ಮಾಡಿಕೊಂಡು ಬಂದಿದ್ದನು ಎನ್ನಲಾಗಿದೆ.
ಸದ್ಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಆರೋಪಿ ವಿಕಾಸ ಗೌಡನನ್ನು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ವಿಕಾಸ ಗೌಡ ‘ನಾನು ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಪಡೆದಿದ್ದೇನೆ. ಆದರೆ ಪ್ರಯಾಣಿಸದೆ ರನ್ ವೇನಲ್ಲೆ ಉಳಿದುಕೊಂಡಿದ್ದೆ. ಸುಮಾರು 4-5 ಗಂಟೆಗಳ ಕಾಲ ಅಲ್ಲಿಯೇ ಇದ್ದು, ವಿಡಿಯೋ ಮಾಡಿಕೊಂಡು ಬಂದಿದ್ದೇನೆ’ ಎಂದು ವಿಚಾರಣೆಯಲ್ಲಿ ವಿವರಿಸಿದ್ದಾನೆ ಎನ್ನಲಾಗಿದೆ. ವಿಕಾಸ್ ಗೌಡ ಯೂಟ್ಯೂಬ್‌ನಲ್ಲಿ ಟ್ರಾವೆಲ್, ಫುಡ್ ಸೇರಿದಂತೆ ವಿಶೇಷ ರೀತಿಯ ಕಟೆಂಟ್‌ಗಳನ್ನು ಮಾಡುತ್ತಿದ್ದರು. ಈಗಾಗಲೇ ವಿಕಾಸ್ ಗೌಡ ಯೂಟ್ಯೂಬ್‌ನಲ್ಲಿ 113K ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಆದರೆ ಇದೀಗ ವ್ಯೂವ್ಸ್ ಹೆಚ್ಚಿಸುವ ಭರದಲ್ಲಿ ಮಾಡಿದ ವಿಡಿಯೋವೊಂದು ವಿಕಾಸ್ ಗೌಡಗೆ ಕುತ್ತು ತಂದಿದೆ.
ಇತ್ತಿಚಿಗೆ ಸಾಮಾಜಿಕ ಜಾಲತಾಣಗಳು ಎಲ್ಲರ ಜೀವನದಲ್ಲಿ ಹಾಸು ಹೊಕ್ಕಿದೆ. ಬೆಳಗ್ಗೆ ಎದ್ದ ಸಮಯದಿಂದ ರಾತ್ರಿ ಮಲಗುವರೆಗೂ ಸಾಮಾಜಿಕ ಜಾಲತಾಣಗಳು ನಮ್ಮ ಜೊತೆಗಿರುತ್ತದೆ. ದಿನದ ಬಹುತೇಕ ಸಮಯವನ್ನು ಹೆಚ್ಚಿನವರು ಇದರೊಂದಿಗೆ ಕಳೆಯುತ್ತಾರೆ. ಕೆಲವರು ಸಾಮಾಜಿಕ ಜಾಲತಾಣಗಳನ್ನು ಮನೋರಂಜನೆಗೆ ಬಳಸಿದೆ, ಕೆಲವರು ಇದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಯೂಟ್ಯೂಬ್ ವಿಡಿಯೋ, ಫೇಸ್‌ಬುಕ್ ಇನ್ಸ್ಟಾಗ್ರಾಮ್ ಪೋಸ್ಟ್‌ಗಳಿಂದ ದುಡಿಯುವವರು ಹಲವಾರು ಜನರು ಇದ್ದಾರೆ. ಈ ರೀತಿ ದುಡಿಯಲು ಹೆಚ್ಚಿನ ವ್ಯೂಸ್ ಬೇಕು. ಹೀಗಾಗಿ ಹೆಚ್ಚಿನ ವ್ಯೂವ್ಸ್ ಹಿಂದೆ ಬಿದ್ದು ಆಪತ್ತು ತಂದುಕೊಂಡವರ ಉದಾಹರಣೆಗಳು ಸಾಲು ಸಾಲಿದೆ.