ಬೆಂಗಳೂರು: ನಿನ್ನೆ (ಏಪ್ರಿಲ್​ 21) ಕೋಲ್ಕತ್ತಾದ ಈಡೆನ್ ಗಾರ್ಡನ್​ ಸ್ಟೇಡಿಯಂನಲ್ಲಿ ನಡೆದ ಕೊಲ್ಕತ್ತಾ ನೈಟ್​ ರೈಡರ್ಸ್ (ಕೆಕೆಆರ್​) ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡಗಳ ನಡುವಿನ ಪಂದ್ಯವು ಬಹಳ ರೋಚಕವಾಗಿ ಮೂಡಿಬಂದಿತು. ಕಡೆಯ ಓವರ್​ವರೆಗೂ ಹೋದ ಭಾರೀ ಹಣಾಹಣಿಯಲ್ಲಿ ಒಂದೇ ಒಂದು ರನ್​ನಿಂದ ಆರ್​ಸಿಬಿ  ಗೆಲುವಿನ ಪತಾಕೆ ಹಾರಿಸುವಲ್ಲಿ ಮುಗ್ಗರಿಸಿತು.

ಈ ಮೂಲಕ ಕೆಕೆಆರ್​ ತಮ್ಮ ಸ್ಥಾನವನ್ನು ಭದ್ರವಾಗಿ ಉಳಿಸಿಕೊಳ್ಳುವಲ್ಲಿ ಮತ್ತೊಮ್ಮೆ ಯಶಸ್ವಿಯಾಯಿತು.

ಆದರೆ, ಈ ಪಂದ್ಯದಲ್ಲಿ ಕೆಕೆಆರ್​ ನೀಡಿದ 223 ರನ್​ ಗುರಿಯನ್ನು ಬೆನ್ನಟ್ಟಿದ ಆರಂಭಿಕ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಬಹಳ ಬೇಗನೇ ಕ್ಯಾಚ್​ ಔಟ್​ ಆದರು. ಆದರೆ, ಕೊಹ್ಲಿಯ ಪ್ರಕಾರ ಇದು ಔಟ್ ಆಗಿರಲಿಲ್ಲ, ಬದಲಿಗೆ ನೋ ಬಾಲ್ ಆಗಿತ್ತು ಎಂಬುದು ವಾದವಾಗಿತ್ತು. ಇದನ್ನು ಮೈದಾನದಲ್ಲೇ ಅಂಪೈರ್​ಗೆ ತಿಳಿಸಿದ ವಿರಾಟ್​, ಇದು ಹೇಗೆ ಔಟ್ ಆಗಲು ಸಾಧ್ಯ ಎಂದು ಸಿಟ್ಟಿನಿಂದ ಪ್ರಶ್ನಿಸಿದರು. ಈ ಪಂದ್ಯದಲ್ಲಿ ಅಂಪೈರ್‌ಗಳು ಮಾಡಿದ ತಪ್ಪಿನಿಂದಾಗಿ ಕ್ರಿಕೆಟ್ ಜಗತ್ತೇ ಸದ್ಯ ತಲ್ಲಣಗೊಂಡಿದ್ದು, ಐಪಿಎಲ್ ಲೀಗ್ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ಘೋರ ಪ್ರಮಾದ ನಡೆದಿದೆ ಎಂಬ ಆರೋಪಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸುತ್ತುವರೆದಿದೆ.

ಅಂಪೈರ್​ಗಳು ಮಾಡಿದ ತಪ್ಪಿಗೆ ಆರ್​ಸಿಬಿ ಬಲಿಯಾಗಿದ್ದು, ಈ ಸೀಸನ್​ನಲ್ಲಿ ಪ್ಲೇ ಆಫ್​ಗೆ ಏರುವ ಅವಕಾಶಗಳನ್ನು ಜೀವಂತವಾಗಿರಿಸಿಕೊಳ್ಳಲು, ಗೆಲ್ಲಲೇಬೇಕು ಎಂಬ ಗುರಿಯೊಂದಿಗೆ ನಿನ್ನೆ ಕೆಕೆಆರ್​ ವಿರುದ್ಧ ಸೆಣಸಾಡಿದ ಆರ್‌ಸಿಬಿ, ಗೆಲುವಿಗೆ ಇನ್ನು ಒಂದು ಹೆಜ್ಜೆ ಬಾಕಿ ಇರುವಾಗ ವಿರೋಚಿತ ಸೋಲನ್ನು ಅನುಭವಿಸಿತು. ವಿವಾದಗಳ ನಡುವೆಯೂ ವಿರಾಟ್​ ಪಂದ್ಯ ಮುಗಿದ ಮೇಲೂ ತಮ್ಮ ಅಸಮಾಧಾನ ಮುಂದುವರೆಸಿದರು. ಪಂದ್ಯದ ನಂತರವೂ ಅಂಪೈರ್ ಜತೆಗೆ ಮಾತನಾಡಿದ ಕೊಹ್ಲಿ ತನ್ನದು ಔಟ್ ಅಲ್ಲ ಎಂಬುದನ್ನು ವಿವರಿಸಿದರು. ಇದಕ್ಕೆ ಅಂಪೈರ್​ ಸಹ ಔಟ್​ ಕೊಡಲು ಕಾರಣವೇನು ಎಂಬುದನ್ನು ಮನವರಿಕೆ ಮಾಡಿದರು. ಇಷ್ಟಾದರೂ ಕೊಹ್ಲಿಯ ಮಾತ್ರ ಕೋಪ ತಣ್ಣಗಾಗಲಿಲ್ಲ.

ಈಡನ್ ಗಾರ್ಡನ್ಸ್‌ನಲ್ಲಿ ಭಾನುವಾರ ನಡೆದ ಐಪಿಎಲ್ 2024ರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಹಾಗೂ ಫೀಲ್ಡ್​ ಅಂಪೈರ್​ಗಳೊಂದಿಗೆ ತೀವ್ರ ವಾಗ್ವಾದ ನಡೆಸಿದ್ದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಓಪನರ್ ಆದ ಸ್ಟಾರ್ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿಗೆ ಇದೀಗ ಭಾರೀ ದಂಡವನ್ನು ವಿಧಿಸಲಾಗಿದ್ದು, ತಮ್ಮ ಪಂದ್ಯ ಶುಲ್ಕದ ಶೇಕಡಾ 50 ರಷ್ಟು ಮೊತ್ತವನ್ನು ಫೈನ್ ಆಗಿ ಸ್ವೀಕರಿಸಲಾಗಿದೆ,(ಏಜೆನ್ಸೀಸ್).

Leave a Reply

Your email address will not be published. Required fields are marked *