ಭಾರತದ ಎರಡು ಜನಪ್ರಿಯ ಬ್ರಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಮಸಾಲೆ ಉತ್ಪನ್ನಗಳಿಗೆ ಹಾಂಕಾಂಗ್ ಮತ್ತು ಸಿಂಗಾಪುರ ನಿಷೇಧ ಹೇರಿದೆ. ಎರಡೂ ಬ್ರಾಂಡ್‌ಗಳ ಉತ್ಪನ್ನಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಅಂಶಗಳಿವೆ ಎನ್ನುವ ಆರೋಪದ ಮೇಲೆ ನಿಷೇಧ ಹೇರಲಾಗಿದೆ.
ಸಿಂಗಾಪುರ ಮತ್ತು ಹಾಂಕಾಂಗ್‌ನಲ್ಲಿ ಮಸಾಲೆ ಉತ್ಪನ್ನಗಳಿಗೆ ನಿಷೇಧ ಹೇರಿದ ಬಳಿಕ ಎಚ್ಚೆತ್ತ ಭಾರತ ಸರ್ಕಾರ ಕ್ರಮಕ್ಕೆ ಮುಂದಾಗಿದೆ.
ದೇಶದ ಎಲ್ಲಾ ಉತ್ಪಾದನಾ ಘಟಕಗಳಿಂದ ಮಸಾಲೆಗಳ ಮಾದರಿ ಸಂಗ್ರಹಿಸಿ ಪರೀಕ್ಷೆ ಮಾಡಲು ಆಹಾರ ಆಯುಕ್ತರಿಗೆ ಕೇಂದ್ರ ಸರ್ಕಾರ ಆದೇಶ ನೀಡಿದೆ ಎಂದು ಮೂಲಗಳು ತಿಳಿಸಿವೆ.
ದೇಶದ ಎಲ್ಲಾ ಆಹಾರ ಆಯುಕ್ತರಿಗೆ ಸೂಚನೆ ನೀಡಲಾಗಿತ್ತು, ಮಸಾಲೆಗಳ ಮಾದರಿಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಮೂರ್ನಾಲ್ಕು ದಿನಗಳಲ್ಲಿ, ದೇಶದ ಎಲ್ಲಾ ಮಸಾಲೆ ತಯಾರಿಕಾ ಘಟಕಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಸರ್ಕಾರದ ಉನ್ನತ ಮೂಲಗಳು ಹೇಳಿವೆ.
ಎಂಡಿಹೆಚ್ ಮತ್ತು ಎವರೆಸ್ಟ್ ಮಾತ್ರವಲ್ಲ, ಎಲ್ಲಾ ಮಸಾಲೆ ತಯಾರಿಕಾ ಕಂಪನಿಗಳಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗುವುದು. ಸುಮಾರು 20 ದಿನಗಳಲ್ಲಿ ಪ್ರಯೋಗಾಲಯದಿಂದ ವರದಿ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಸಾಲೆಗಳಲ್ಲಿ ಎಥಿಲೀನ್ ಆಕ್ಸೈಡ್ ಪತ್ತೆ
ಹಾಂಗ್ ಕಾಂಗ್ ಮತ್ತು ಸಿಂಗಾಪುರದ ಆಹಾರ ನಿಯಂತ್ರಕರ ಪ್ರಕಾರ, ಎಂಡಿಎಚ್ ಮತ್ತು ಎವೆರೆಸ್ಟ್ ಬ್ರಾಂಡ್ ಮಸಾಲೆಗಳಲ್ಲಿ “ಅನುಮತಿ ನೀಡಿರುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ” ಎಥಿಲೀನ್ ಆಕ್ಸೈಡ್ ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ನಿಂದ ಎಥಿಲೀನ್ ಆಕ್ಸೈಡ್ ಅನ್ನು ‘ಗ್ರೂಪ್ 1 ಕಾರ್ಸಿನೋಜೆನ್’ ಎಂದು ವರ್ಗೀಕರಿಸಲಾಗಿದೆ.
ಎಂಡಿಎಚ್‌ನ ಮೂರು ಮಸಾಲೆ ಉತ್ಪನ್ನಗಳಾದ, ಮದ್ರಾಸ್ ಕರಿ ಪೌಡರ್, ಸಾಂಬಾರ್ ಮಸಾಲಾ, ಮತ್ತು ಕರಿ ಪುಡಿ, ಎವರೆಸ್ಟ್‌ನ ಫಿಶ್ ಕರಿ ಮಸಾಲಾದಲ್ಲಿ “ಕೀಟನಾಶಕ, ಎಥಿಲೀನ್ ಆಕ್ಸೈಡ್” ಇದೆ ಎಂದು ಆಹಾರ ಸುರಕ್ಷತೆಗಾಗಿ ಹಾಂಗ್ ಕಾಂಗ್‌ನ ಕೇಂದ್ರ (CFS) ಏಪ್ರಿಲ್ 5 ರಂದು ಹೇಳಿದೆ.
ಈ ಎರಡು ಬ್ರಾಂಡ್‌ನ ಮಸಾಲೆಗಳ ಮಾರಾಟವನ್ನು ನಿಲ್ಲಿಸಲು ಮತ್ತು ಸ್ಟಾಕ್ ಇರುವ ಉತ್ಪನ್ನಗಳನ್ನು ಅಂಗಡಿಯಿಂದ ತೆಗೆದುಹಾಕಲು” ಮಾರಾಟಗಾರರಿಗೆ ಸೂಚನೆ ನೀಡಲಾಗಿದೆ.
ಸಿಂಗಾಪುರ್ ಫುಡ್ ಏಜೆನ್ಸಿ (ಎಸ್‌ಎಫ್‌ಎ) ಎವರೆಸ್ಟ್‌ನ ಫಿಶ್ ಕರಿ ಮಸಾಲಾದಲ್ಲಿ ಹೆಚ್ಚಿನ ಪ್ರಮಾಣದ ಎಥಿಲೀನ್ ಆಕ್ಸೈಡ್ ಇರುವ ಕಾರಣದಿಂದ ಹಿಂಪಡೆಯಲು ಆದೇಶಿಸಿದೆ. ಈ ಆರೋಪಗಳ ಬಗ್ಗೆ ಎಂಡಿಎಚ್ ಮತ್ತು ಎವರೆಸ್ಟ್ ಫುಡ್ಸ್ ಎರಡೂ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಕಠಿಣ ಕ್ರಮದ ಎಚ್ಚರಿಕೆ
ಭಾರತದಲ್ಲಿ ಆಹಾರ ಪದಾರ್ಥಗಳಲ್ಲಿ ಎಥಿಲೀನ್ ಆಕ್ಸೈಡ್ ಬಳಸುವುದನ್ನು ನಿಷೇಧಿಸಲಾಗಿದೆ.
“ಭಾರತೀಯ ಮಸಾಲೆಗಳಲ್ಲಿ ಹಾನಿಕಾರಕ ಪದಾರ್ಥಗಳು ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕ್ರಿಮಿನಲ್ ಮೊಕದ್ದಮೆ ದಾಖಲಿಸಲೂ ಅವಕಾಶವಿದೆ” ಎಂದು ಮೂಲಗಳು ತಿಳಿಸಿವೆ.
ಏನಿದು ಎಥಿಲೀನ್ ಆಕ್ಸೈಡ್?
ಮಸಾಲೆಗಳ ಮಂಡಳಿಯು ಎಥಿಲೀನ್ ಆಕ್ಸೈಡ್ ಅನ್ನು “10.7 ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಸುಡುವ, ಬಣ್ಣರಹಿತ ಅನಿಲ ಎಂದು ಹೇಳುತ್ತದೆ. ಇದು “ಸೋಂಕು ನಿವಾರಕ, ಫ್ಯೂಮಿಗಂಟ್, ಕ್ರಿಮಿನಾಶಕ ಏಜೆಂಟ್ ಮತ್ತು ಕೀಟನಾಶಕ” ವಾಗಿ ಕೆಲಸ ಮಾಡುತ್ತದೆ.
ಇದನ್ನು ಮುಖ್ಯವಾಗಿ ವೈದ್ಯಕೀಯ ಉಪಕರಣಗಳನ್ನು ಕ್ರಿಮಿನಾಶಕಗೊಳಿಸಲು ಮತ್ತು ಮಸಾಲೆಗಳಲ್ಲಿ ಸೂಕ್ಷ್ಮಜೀವಿಯ ಮಾಲಿನ್ಯವನ್ನು ಕಡಿಮೆ ಮಾಡಲು ಬಳಕೆ ಮಾಡಲಾಗುತ್ತದೆ.
ವರ್ಲ್ಡ್ ಹೆಲ್ತ್ ಆರ್ಗನೈಸೇಶನ್‌ನ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) ಎಥಿಲೀನ್ ಆಕ್ಸೈಡ್ ಅನ್ನು ‘ಗ್ರೂಪ್ 1 ಕಾರ್ಸಿನೋಜೆನ್’ ಎಂದು ವರ್ಗೀಕರಿಸಿದೆ, ಇದು ಜನರಲ್ಲಿ ಕ್ಯಾನ್ಸರ್ ಕಾಯಿಲೆ ಉಂಟು ಮಾಡುತ್ತದೆ ಎಂದು ಸಾಕ್ಷಿಗಳಿವೆ.