ಕೂಡಲಸಂಗಮ: ದಕ್ಷಿಣದ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಇಲ್ಲಿನ ಸಂಗಮೇಶ್ವರ ಜಾತ್ರೆಯು ಏಪ್ರಿಲ್ 29ರಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.

ಶತಮಾನಗಳ ಇತಿಹಾಸ ಇರುವ ಸಂಗಮೇಶ್ವರನ ವೈಭವದ ಜಾತ್ರಾ ಮಹೋತ್ಸವ ಚೈತ್ರ ಬಹುಳ ಪಂಚಮಿಯಂದು ಜರುಗುತ್ತಿದೆ. ಜಾತ್ರೆ ಅಂಗವಾಗಿ ಸಂಗಮೇಶ್ವರನ ದೇವಾಲಯ, ಪ್ರವೇಶ ದ್ವಾರ, ಬಸವೇಶ್ವರ ವೃತ್ತ, ಚಾಲುಕ್ಯ ಮಹಾದ್ವಾರ ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿವೆ.

ಕೂಡಲಸಂಗಮದ ಸಂಗಮನಾಥ ಮೂರ್ತಿ

ಜಾತ್ರೆ ಅಂಗವಾಗಿ ಕ್ಷೇತ್ರದಲ್ಲಿ ಒಂಬತ್ತು ದಿನಗಳವರೆಗೆ ಗ್ರಾಮಸ್ಥರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನಿತ್ಯ ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಪುರವಂತರ ಮೆರವಣಿಗೆ ಜರುಗಲಿದೆ.

ಏ.29ರಂದು ಬೆಳಿಗ್ಗೆ 6 ಗಂಟೆಗೆ ಉತ್ಸವ ಮೂರ್ತಿಯ ರಥೋತ್ಸವ, ಸಂಜೆ 6 ಗಂಟೆಗೆ ಲಕ್ಷಾಂತರ ಭಕ್ತರು, ನಾಡಿನ ಮಠಾಧೀಶರ ಸಮ್ಮುಖದಲ್ಲಿ ಭಕ್ತಿ, ಜಯಘೋಷಗಳ ನಡುವೆ ವೈಭವದ ಸಂಗಮೇಶ್ವರ ರಥೋತ್ಸವ ನಡೆಯಲಿದೆ.

ಬಂಗಾರ ಲೇಪಿತ ಕಳಸ: ಸಂಗಮೇಶ್ವರ ರಥಕ್ಕೆ ಅಳವಡಿಸಲು ಬಂಗಾರ ಲೇಪವುಳ್ಳ ಭವ್ಯವಾದ ಕಳಸವನ್ನು ಬಾಗಲಕೋಟೆಯಿಂದ ಮೆರವಣಿಗೆಯಲ್ಲಿ ಸಂಗಮಕ್ಕೆ ತರಲಾಗುತ್ತದೆ. ಈ ಮಾರ್ಗದಲ್ಲಿರುವ ಹಳ್ಳೂರ, ಬೇವೂರ, ಭಗವತಿ, ಕಿರಸೂರು, ಮಲ್ಲಾಪೂರ ಮುಂತಾದ ಗ್ರಾಮಗಳ ಜನರು ಕಳಸಕ್ಕೆ ಪೂಜೆ ಮಾಡುತ್ತಾರೆ.

ಕೂಡಲಸಂಗಮಕ್ಕೆ ಬರುವ ಕಳಸವವನ್ನು ಮೆರವಣಿಗೆಯ ಮೂಲಕ ತಂದು, ಅಗಸಿಯ ಹತ್ತಿರ ಇರುವ ಹಾಳಕೇರಿಯವರ ಕಳಸದ ಕಟ್ಟೆ ಮೇಲೆ ಇಡಲಾಗುವುದು. ಸಂಜೆ 5 ಗಂಟೆಯವರೆಗೆ ಭಕ್ತರು ಕಳಸದ ದರ್ಶನ ಪಡೆಯುವರು. ನಂತರ ಸಂಗಮೇಶ್ವರ ದೇವಾಲಯಕ್ಕೆ ಕೊಂಡೊಯ್ದು, ಪೂಜೆ ಮಾಡಿ, ರಥಕ್ಕೆ ಅಳವಡಿಸಲಾಗುತ್ತದೆ.

ಗ್ರಾಮಸ್ಥರ ಪಾಲ್ಗೊಳ್ಳುವಿಕೆ : ಸಂಗಮನಾಥನ ಜಾತ್ರೆಗೆ ಹಲವಾರು ಗ್ರಾಮಗಳ ಜನರು ವಿವಿಧ ಕಾರ್ಯಗಳಲ್ಲಿ ತೊಡಗುವ ಮೂಲಕ ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವರು. ಬೆಳಗಲ್ಲ ಗ್ರಾಮದಿಂದ ತೇರಿನ ಹಗ್ಗ, ಗಂಜೀಹಾಳ ಗ್ರಾಮದಿಂದ ಬಾಳೆಕಂಬ, ತಳಿರು ತೋರಣ, ಇದ್ದಲಗಿಯಿಂದ ಹಿಲಾಲು, ತಂಗಡಗಿಯಿಂದ ನೀಲಮ್ಮನ ಪಲ್ಲಕ್ಕಿ, ಗುಳೇದಗುಡ್ಡದಿಂದ ಉತ್ಸವಮೂರ್ತಿಯ ಕಳಸ ಹಾಗೂ ಪಲ್ಲಕ್ಕಿ ತರಲಾಗುತ್ತದೆ.

ವಿವಿಧ ಪೂಜೆಗಳು: ಸಂಗಮನಾಥನಿಗೆ ಐದು ಪೂಜೆಗಳು ನಡೆಯುತ್ತವೆ. ಮುಂಜಾನೆ 5 ಗಂಟೆಗೆ ದೇವರ ಪೂಜೆ, 6 ಗಂಟೆಗೆ ರುದ್ರಾಭಿಷೇಕ ಪೂಜೆ, ಮಧ್ಯಾಹ್ನ 12 ಗಂಟೆಗೆ ಧೂಪಾರತಿ ಪೂಜೆ, ಸಂಜೆ 5 ಗಂಟೆಗೆ ದೇವರ ಪೂಜೆ, ರಾತ್ರಿ 8.30ಕ್ಕೆ ಮಹಾಮಂಗಳಾರತಿ ಪೂಜೆ ನಡೆಯುವುದು.

Leave a Reply

Your email address will not be published. Required fields are marked *