ಹೊಸನಗರ: ತಾಲ್ಲೂಕಿನಲ್ಲಿ ಲೋಕಸಭಾ ಚುನಾವಣೆಯ ರಂಗು ಹೆಚ್ಚುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಗಟ್ಟಿಗೊಳ್ಳುತ್ತಿದೆ. ಗ್ರಾಮಗಳ ಮೂಲ ಸೌಕರ್ಯಗಳ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮಸ್ಥರು ಸಭೆ ನಡೆಸಿ ಮತದಾನ ಬಹಿಷ್ಕಾರ ಹಾಕುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ.

ತಾಲ್ಲೂಕಿನ ಏಳೆಂಟು ಗ್ರಾಮಗಳು ಈಗಾಗಲೇ ಚುನಾವಣೆ ಬಹಿಷ್ಕಾರ ಹಾಕಿದ್ದು, ಅಧಿಕಾರಿಗಳ ವರ್ಗ ಅಲ್ಲಿಗೆ ಭೇಟಿ ನೀಡಿ ಮನವೊಲಿಸುವ ಕೆಲಸ ಮಾಡಿದ್ದರೂ ಗ್ರಾಮಸ್ಥರು ಅದಕ್ಕೆ ಜಗ್ಗದೆ ಮತದಾನ ಬಹಿಷ್ಕಾರದ ನಿರ್ಣಯವನ್ನು ಅಚಲಗೊಳಿಸಿದ್ದಾರೆ.

ತಾಲ್ಲೂಕಿನ ಸಂಸೆಕೈ, ತೌಡುಗೊಳಿ ಗ್ರಾಮಸ್ಥರು ತಮ್ಮ ಊರಿನ ಸಂಪರ್ಕ ರಸ್ತೆ ದುರಸ್ತಿಗೆ ಆಗ್ರಹಿಸಿ ಮತದಾನ ಬಹಿಷ್ಕಾರ ಹಾಕಿದ ಮೊದಲ ಗ್ರಾಮವಾಗಿದೆ. ನಂತರ ವಾರಂಬಳ್ಳಿ ಗ್ರಾಮದಲ್ಲಿ ದೂರ ಸಂಪರ್ಕ ಇಲ್ಲವೆಂದು ಆರೋಪಿಸಿದ ಗ್ರಾಮಸ್ಥರು ಮತದಾನ ಮಾಡುವುದಿಲ್ಲ ಎಂದು ನಿರ್ಣಯ ಕೈಗೊಂಡರು.

ಯಡೂರು ಬಳಿಯ ಮಾಗಲು ಗ್ರಾಮಸ್ಥರು ಕೂಡ ರಸ್ತೆ ಸರಿ ಇಲ್ಲ ಎಂದು ಬಹಿಷ್ಕಾರದ ಕೂಗು ಎಬ್ಬಿಸಿದ್ದಾರೆ. ಇನ್ನು ಕುಂಬತ್ತಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಖಂಡಿಸಿ ಮತ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಬಿಲಗೋಡಿ, ಈಚಲಕೊಪ್ಪ, ಕಾಪೇರಮನೆ ಗ್ರಾಮಸ್ಥರು ಕೂಡ ‘ನಮ್ಮೂರಿಗೆ ಮತ ಕೇಳಲು ಬರಬೇಡಿ’ ಎಂದು ಒಕ್ಕೊರಲ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯದ್ದೇ ದೊಡ್ಡ ಸಮಸ್ಯೆ: ತಾಲ್ಲೂಕಿನ ಮತ್ತಿಕೈ ಗ್ರಾಮದ ತುತ್ತಿಕೊಡ್ಲು, ಸಂಸೆಕೈ, ತೌಡುಗೊಳ್ಳಿ ಕುಗ್ರಾಮಗಳಾಗಿವೆ. ಇಲ್ಲಿ ಉತ್ತಮ ರಸ್ತೆ ಇಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ತಿರ್ಮಾನ ಕೈಗೊಂಡು ಬ್ಯಾನರ್ ಕಟ್ಟಿ ಎಚ್ಚರಿಕೆ ನೀಡಿದ್ದಾರೆ.

ಈ ಮೂರು ಗ್ರಾಮಗಳಲ್ಲಿ 35ಕ್ಕೂ ಹೆಚ್ಚು ಮನೆಗಳಿದ್ದು, 200 ಮಂದಿ ವಾಸವಿದ್ದಾರೆ. ಗ್ರಾಮ ಸಂಪರ್ಕಿಸುವ 3 ಕಿ.ಮೀ. ರಸ್ತೆ ಇಂದಿಗೂ ದುರಾವಸ್ಥೆಯಲ್ಲಿದೆ. ‘ನಾವು ನಡೆಸಿದ ಹತ್ತಾರು ಹೋರಾಟ ವ್ಯರ್ಥವಾಗಿದೆ’ ಎಂದು ಗ್ರಾಮಸ್ಥರು ದೂರುತ್ತಾರೆ.

ಕುಗ್ರಾಮಗಳ ತವರು: ಹೊಸನಗರ ಹೇಳಿ ಕೇಳಿ ಅಭಿವೃದ್ಧಿಯಲ್ಲಿ ಹಿಂದುಳಿದ ತಾಲ್ಲೂಕು. ಕುಗ್ರಾಮಗಳ ತವರೂರು. ಬಹಳಷ್ಟು ಗ್ರಾಮಗಳಲ್ಲಿ ಜನರ ಓಡಾಟಕ್ಕೆ ಸಂಪರ್ಕ ವ್ಯವಸ್ಥೆಯೇ ಇಲ್ಲ. ರಸ್ತೆ, ಮೋರಿ, ಸೇತುವೆ, ಕುಡಿಯುವ ನೀರು, ದೂರವಾಣಿ, ಕಾಲುಸಂಕ ಇಲ್ಲಿನ ಜ್ವಲಂತ ಸಮಸ್ಯೆಗಳು.

ಗ್ರಾಮಸ್ಥರು ಸೌಕರ್ಯ ಪಡೆಯುವಲ್ಲಿ ಸೋತ್ತಿದ್ದಾರೆ. ಸಾಲು ಸಾಲು ಮನವಿ ನೀಡಿ ಬೇಸತ್ತಿದ್ದಾರೆ. ಇದೀಗ ಲೋಕಸಭಾ ಚುನಾವಣೆ ಎದುರಾಗಿದ್ದು ಗ್ರಾಮಸ್ಥರು ಮತ ಬಹಿಷ್ಕಾರದಂತಹ ಹೋರಾಟಕ್ಕೆ ಇಳಿದು ಎಚ್ಚರಿಕೆ ರವಾನಿಸಿದ್ದಾರೆ.

ಜನಪ್ರತಿನಿಧಿಗಳ ಮೌನ: ಗ್ರಾಮೀಣ ಭಾಗದಲ್ಲಿ ಮತ ಬಹಿಷ್ಕಾರದಂತಹ ಗಟ್ಟಿದ್ವನಿ ಕೇಳಿ ಬರುತ್ತಿದ್ದರೂ ಜನಪ್ರತಿನಿಧಿಗಳು ಇದರತ್ತ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಮಾಹಿತಿ ಇದ್ದರೂ ಸಮಸ್ಯೆ ನಿವಾರಣೆಗೆ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಅಧಿಕಾರಿಗಳಿಗೆ ತಲೆಬಿಸಿ

ಗ್ರಾಮೀಣ ಭಾಗದಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಇದೇ ಮೊದಲಲ್ಲ. ಬಹಿಷ್ಕಾರ ಕೇಳಿ ಬಂದಾಗ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ಚುನಾವಣೆ ನಡೆಸಿದ್ದರು. ಈ ಬಾರಿಯೂ ಬಹಿಷ್ಕಾರ ಎಚ್ಚರಿಕೆಯ ಕೂಗು ಗಟ್ಟಿಗೊಳ್ಳುತ್ತಿದೆ. ಇದು ಅಧಿಕಾರಿಗಳಿಗೆ ತಲೆಬಿಸಿಯಾಗಿದೆ. ಬಹಿಷ್ಕಾರದ ಕೂಗು ಕೇಳಿ ಬಂದ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವ ನೆಪ ಮಾತ್ರದ ನಾಟಕ ನಡೆಯುತ್ತಿದೆ. ಆದರೆ ಇದಕ್ಕೆಲ್ಲ ಜಗ್ಗದ ಗ್ರಾಮಸ್ಥರು ತಮ್ಮ ನಿರ್ಧಾರ ಅಚಲ ಎನ್ನುತ್ತಿದ್ದಾರೆ.

Leave a Reply

Your email address will not be published. Required fields are marked *