ಎಸ್‌ಎಸ್‌ಎಲ್‌ಸಿ 2024ರ ಪರೀಕ್ಷೆ ಫಲಿತಾಂಶ ಹೊರಬರಲು ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಹೀಗಿದ್ದಾಗ ವಿದ್ಯಾರ್ಥಿಗಳಿಗೆ ಟೆನ್ಷನ್ ಶುರುವಾಗಿದೆ. ಹಾಗೇ ವಿದ್ಯಾರ್ಥಿಗಳ ಅಪ್ಪ & ಅಮ್ಮನಿಗೂ ಟೆನ್ಷನ್ ಶುರುವಾಗಿದೆ. ಆದರೆ ಟೆನ್ಷನ್ ಬಿಟ್ಟಾಕಿ, ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಯಾವ ಕೋರ್ಸ್ ಮಾಡಬೇಕು ಅನ್ನೋದನ್ನ ತಿಳಿಯೋಣ ಬನ್ನಿ.
ಹಾಗೇ 2024ರ, ಎಸ್‌ಎಸ್‌ಎಲ್‌ಸಿ ರಿಸಲ್ಟ್ ಯಾವಾಗ ಬರುತ್ತೆ ಅನ್ನೋದನ್ನೂ ತಿಳಿಯೋಣ.
ಎಸ್‌ಎಸ್‌ಎಲ್‌ಸಿ ಮುಗಿಯುತ್ತಿದ್ದಂತೆ ಸ್ಕೂಲ್ ಮುಗಿಸಿದಂತೆ ಆಗುತ್ತೆ, ಆ ಬಳಿಕ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗುತ್ತದೆ. ಹೀಗಾಗಿ, ಎಸ್‌ಎಸ್‌ಎಲ್‌ಸಿ ಅನ್ನೋದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲೂ ಪ್ರಮುಖ ಘಟ್ಟ. ಈಗ ಕೂಡ ಅಷ್ಟೇ ಎಸ್‌ಎಸ್‌ಎಲ್‌ಸಿ ರಿಸಲ್ಟ್ ಹೊರಬೀಳಲು ಕ್ಷಣಗಣನೆ ಆರಂಭವಾಗಿದೆ, ಇನ್ನೇನು ಮೇ 10ನೇ ತಾರೀಖು ಕರ್ನಾಟಕದ 2024ರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬೀಳಲಿದೆ. ಹಾಗಾದರೆ, ಎಸ್‌ಎಸ್‌ಎಲ್‌ಸಿ ಮುಗಿದ ನಂತರ ನೀವು ಯಾವೆಲ್ಲಾ ಕೋರ್ಸ್ ಮಾಡಬಹುದು? ಮುಂದಿನ ಶಿಕ್ಷಣ ಹೇಗೆ ಇರುತ್ತೆ? ನೋಡೋಣ ಬನ್ನಿ.
‘ಪಿಯುಸಿ’ ಸೇರಿದರೆ ವರ್ಕೌಟ್ ಆಗುತ್ತಾ?
ಎಸ್‌ಎಸ್‌ಎಲ್‌ಸಿ ಮುಗಿದ ನಂತರ ಪ್ರತಿಯೊಬ್ಬರು ತಮ್ಮ ಭವಿಷ್ಯದ ಕುರಿತು ಯೋಚನೆ ಮಾಡಿ ಮುಂದಿನ ಶಿಕ್ಷಣದ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಅದರಲ್ಲೂ ಪ್ರಮುಖವಾಗಿ ಬಹುತೇಕ ವಿದ್ಯಾರ್ಥಿಗಳು SSLC ಮುಗಿಸಿದ ನಂತರ ಪಿಯುಸಿ ಅಂದರೆ ಪದವಿ ಪೂರ್ವ ಶಿಕ್ಷಣಕ್ಕೆ ಸೇರಿ, ತಮ್ಮ ಭವಿಷ್ಯಕ್ಕಾಗಿ ಕಷ್ಟಪಡುತ್ತಾರೆ. ಹೀಗೆ ಪಿಯುಸಿ 2 ವರ್ಷ ಇರಲಿದ್ದು, ಪ್ರಥಮ ಮತ್ತು ದ್ವಿತೀಯ ಎಂದು 2 ಭಾಗವಾಗಿ ಪಿಯುಸಿ ಶಿಕ್ಷಣ ನಿರ್ಧಾರ ಮಾಡಲಾಗುತ್ತೆ. ದ್ವಿತೀಯ ಪಿಯುಸಿ ಹಂತದಲ್ಲಿ ಮತ್ತೆ ನಿಮಗೆ SSLC ರೀತಿಯಲ್ಲೇ ಬೋರ್ಡ್ ಎಕ್ಸಾಮ್ಸ್ ಇರಲಿದೆ. ಇಲ್ಲಿ ಒಟ್ಟಾರೆ 3 ಆಯ್ಕೆಗಳು ನಿಮಗೆ ಸಿಗಲಿದೆ.
ಭಾರತೀಯ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪದ್ಧತಿಗೆ ಅನುಸಾರವಾಗಿ, ಸೈನ್ಸ್ ಅಂದ್ರೆ ವಿಜ್ಞಾನ ವಿಭಾಗ, ಕಾಮರ್ಸ್ ಎಂದರೆ ವಾಣಿಜ್ಯ ವಿಭಾಗ ಹಾಗೂ ಆರ್ಟ್ಸ್ ಎಂದರೆ ಕಲಾ ವಿಭಾಗವಾಗಿ ವಿಂಗಡಣೆ ಮಾಡಲಾಗುತ್ತದೆ. ಹೀಗೆ ಈ 3 ವಿಭಾಗದಲ್ಲಿ ಮತ್ತೆ ಆಯ್ಕೆಗಳು ನಿಮಗೆ ಸಿಗುತ್ತವೆ. ಇನ್ನು ಸೈನ್ಸ್ ಅಂದ್ರೆ ವಿಜ್ಞಾನ ವಿಭಾಗದಲ್ಲಿ ಒಟ್ಟು 3 ಪ್ರಮುಖ ಆಯ್ಕೆಗಳು ನಿಮಗೆ ಸಿಗುತ್ತವೆ.
1ನೇ ಆಯ್ಕೆಯಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಜೀವಶಾಸ್ತ್ರ (PCMB) ತೆಗೆದುಕೊಳ್ಳಬಹುದು, 2ನೇ ಆಯ್ಕೆಯಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ & ಕಂಪ್ಯೂಟರ್ ಸೈನ್ಸ್ (PCMC) ಕೂಡ ಆಯ್ಕೆ ಮಾಡಿಕೊಳ್ಳಬಹುದು. ಹಾಗೇ 3ನೇ ಆಯ್ಕೆಯಾಗಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ (PCME) ಆಯ್ಕೆಯನ್ನೂ ನೀವು ಮಾಡಿಕೊಳ್ಳಬಹುದು.
ವಾಣಿಜ್ಯ ವಿಭಾಗದ ಆಯ್ಕೆಗಳು
ವಿಜ್ಞಾನ ವಿಭಾಗದ ರೀತಿಯಲ್ಲೇ ವಾಣಿಜ್ಯ ವಿಭಾಗದಲ್ಲಿ ಕೂಡ ನೀವು ಪಿಯುಸಿ ಕಲಿಯಲು ಸಾಕಷ್ಟು ವೆರೈಟಿ ಕೋರ್ಸ್‌ಗಳು ಇವೆ. ಇದರಲ್ಲಿ ಪ್ರಮುಖವಾಗಿ ನಿಮಗೆ ಹಣಕಾಸು ಮತ್ತು ಅರ್ಥಶಾಸ್ತ್ರದ ವಿಚಾರಗಳನ್ನು ಕಲಿಸುತ್ತಾರೆ. ಅರ್ಥಶಾಸ್ತ್ರ ಮತ್ತು ಅಕೌಂಟ್ಸ್ ವಿಷಯದಲ್ಲಿ, ಆಸಕ್ತಿ ಹೊಂದಿದವರಿಗೆ ಇಲ್ಲಿ ಅವಕಾಶ ಹೆಚ್ಚು. ಇದರ ಜೊತೆಗೆ ನಿಮಗೆ ಕಂಪ್ಯೂಟರ್‌ನಲ್ಲಿ ಕೂಡ ಹೆಚ್ಚು ಜ್ಞಾನ ಕಲಿಸುತ್ತಾರೆ, ಉದಾಹರಣೆಗೆ ಸಿಇಬಿಎ (CEBA), ಸಿಎಸ್‌ಬಿಎ (CSBA), ಎಂಇಬಿಎ (MEBA), ಎಂಎಸ್‌ಬಿಎ (MSBA) ಹೀಗೆ ಹಲವು ಆಯ್ಕೆಗಳು ಇರುತ್ತವೆ. ಆದರಲ್ಲಿ ನಿಮಗೆ ಬ್ಯುಸಿನೆಸ್ ಸ್ಟಡೀಸ್ & ಅಕೌಂಟ್ಸ್ ಕಡ್ಡಾಯವಾಗಿ ಓದಬೇಕು.
ಕಲಾ ವಿಭಾಗದಲ್ಲಿ ಕಲಿಯಿರಿ!
ಹಿಂದೆ ಕಲಾ ವಿಭಾಗದ ಬಗ್ಗೆ ಹಗುರವಾದ ಮಾತುಗಳು ಕೇಳಿಬರುತ್ತಿದ್ದವು. ಆದರೆ ಇದೀಗ, ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವ & ದೊಡ್ಡ ಸಾಧನೆ ಮಾಡಿದವರ ಪೈಕಿ ಬಹುತೇಕರು ಇದೇ ಕಲಾ ವಿಭಾಗದಲ್ಲಿ ಓದಿದವರು. ಹೀಗಾಗಿ ಪಿಯುಸಿ ಕಲಾ ವಿಭಾಗ ಕೂಡ ಸಕಾಷ್ಟು, ಜನಪ್ರಿಯತೆ ಹೊಂದಿದೆ. ಕಲಾ ವಿಭಾಗದಲ್ಲಿ ಓದಿದರೆ ಪತ್ರಿಕೋದ್ಯಮ, ಸೋಶಿಯಲ್ ವರ್ಕ್ ಸೇರಿದಂತೆ ಸಿವಿಲ್ ಸರ್ವಿಸ್ ಎಕ್ಸಾಮ್ ಎಂದರೆ, ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ಬರೆಯಲು ಅನುಕೂಲ ಆಗುತ್ತೆ. ಹಾಗೇ ಕಲಾ ವಿಭಾಗದಲ್ಲಿಯೂ ಸಾಕಷ್ಟು ಕೆಲಸದ ಅವಕಾಶ ಸಿಗುತ್ತವೆ.