ರಾಯಚೂರು, ಮೇ 04: ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಮಳೆಯ ಸಿಂಚನವಾಗುತ್ತಿದ್ದರೂ ಸಹ ಬಿಸಿಲಿನ ಪ್ರಕೋಪ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ರಾಯಚೂರು ಜಿಲ್ಲೆಯಲ್ಲಿ ತೀವ್ರ ಬಿಸಲಿನ ಶಾಖದಿಂದ ಒಂದೇ ದಿನ ನಾಲ್ವರು ಮೃತಪಟ್ಟಿದ್ದಾರೆ. ಕಾರಿಗೂ ಬೆಂಕಿ ಹೊತ್ತಿಕೊಂಡು ಉರಿದಿದೆ.
ಹೌದು, ರಾಜ್ಯದಲ್ಲಿ ಬಿಸಿಲಿನ ಶಾಖದಿಂದಾಗಿ 24 ಗಂಟೆಯಲ್ಲಿ ಐವರು ಮೃತಪಟ್ಟಿದ್ದಾರೆ. ಇದರಲ್ಲಿ ನಾಲ್ವರು ರಾಯಚೂರಿನ ಒಂದೇ ಜಿಲ್ಲೆ ವ್ಯಾಪ್ತಿಯಲ್ಲಿ ಮೃತಪಟ್ಟ ಘಟನೆ ಸಿಂಧನೂರು ತಾಲೂಕಿನ ಮುಕ್ಕುಂದಾ ಗ್ರಾಮದಲ್ಲಿ ನಡೆದಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
45 ಡಿ.ಸೆ. ತಾಪಮಾನ ದಾಖಲು
ಈ ಗ್ರಾಮ ವ್ಯಾಪ್ತಿಯಲ್ಲಿ ಶುಕ್ರವಾರ ಅತ್ಯಧಿಕ ತಾಪಮಾನ ದಾಖಲಾಗಿದ್ದು, 45 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚು ಬಿಸಿಲು ದಾಖಲಾಗಿತ್ತು. ತೀವ್ರ ತಾಪಮಾನದಿಂದ ಉಂಟಾದ ನಿರ್ಜಲೀಕರಣ ಕಾರಣದಿಂದಾಗಿ ನಾಲ್ವರು ನಿಧನರಾಗಿದ್ದಾರೆ.
ಹಳ್ಳಕ್ಕೆ ಸಂಜೆ ಬಟ್ಟೆ ತೊಳೆಯಲು ಹೋಗಿದ್ದ ವೀರೇಶ ಮಡಿವಾಳ (51) ಅವರು, ಅಂಗವಿಕಲ ಪ್ರದೀಪ್ ತಿಮ್ಮಣ್ಣ ಪೂಜಾರಿ (15), ಗಂಗಮ್ಮ ದೇವದಾಸಿ (60) ಹಾಗೂ ತುಮಕೂರಿನಲ್ಲಿ ದುರ್ಗಮ್ಮ ಹನುಮಮಂತಪ್ಪ ಉಪ್ಪಾರ್ (60) ಅವರು ಬಿಸಿಲಿನಿಂದಾಗಿ ಮೃತಪಟ್ಟಿದ್ದಾರೆ.
ನೀರು ಕುಡಿಯುವಾಗಲೇ ಕುಸಿದು ಬಿದ್ದು ಸಾವು
ರಾಯಚೂರಿನ ಜಾಲಿಬೆಂಚಿ ನಿವಾಸಿಯಾದ ಹನುಮಂತ (44) ಇವರು ಜಮೀನಿನಿಂದ ಮನೆಗೆ ಬರುವಾಗಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಮನೆಗೆ ಬಂದಿದ್ದರು. ಮನೆಗೆ ಬರುವಷ್ಟರಲ್ಲಿ ಬಿಸಿಲಿಗೆ ಸಾಕಷ್ಟು ಆಯಾಸಗೊಂಡಿದ್ದರು. ಬಾಯಾರಿಕೆಯಾಗಿ ಮನೆಗೆ ಬಂದು ನೀರು ಕುಡಿಯುವಷ್ಟರಲ್ಲಿ ಕುಸಿದು ಬಿದ್ದು ಉಸಿರು ಚೆಲ್ಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಯಚೂರು ಭಾಗದಲ್ಲಿ ಕಳೆದ ಒಂದು ವಾರದಿಂದ ಅತ್ಯಧಿಕ ಬಿಸಿಲು ಕಂಡು ಬರುತ್ತಿದೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಅದರಲ್ಲೂ ರಾಯಚೂರು, ಕಲಬುರಿಗಿಯಲ್ಲಿ ತಾಪಮಾನ ಅತೀ ಹೆಚ್ಚು ಎನ್ನಬಹುದು.
ನಿರ್ಜಲೀಕರಣದಿಂದ ಸಾವು ಸಾಧ್ಯತೆ
ಈ ವರ್ಷ ರಾಯಚೂರು ಮತ್ತು ಸಿಂಧನೂರಿನಲ್ಲಿ ಹೆಚ್ಚು ಬಿಸಿಲಿನಿಂದ ಸುಸ್ತು, ನಿರ್ಜಲೀಕರಣ ಸೇರಿದಂತೆ ಹಲವು ಅನಾರೋಗ್ಯ ಕಾರಣದಿಂದಾಗಿ ಇವರೆಲ್ಲ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೂವರಿಗೆ ನಿರ್ಜಲೀಕರಣವಾಗಿತ್ತು, ಎಂದಿರುವ ವೈದ್ಯರು ಪರಿಶೀಲನೆ ನಡೆಸಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊತ್ತಿ ಉರಿದ ಕಾರು: ಚಾಲಕ ಪಾರು
ಜಿಲ್ಲೆಯ ಶಕ್ತಿನಗರ ವ್ಯಾಪ್ತಿಯ ಹೈದರಾಬಾದ್-ರಾಯಚೂರು ಹೆದ್ದಾರಿಯಲ್ಲಿ ಶುಕ್ರವಾರ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಮೊದಲು ಹೊಗೆ ಕಾಣಸಿಕೊಂಡಿದೆ. ಕಾರು ನಿಧಾನ ಮಾಡಿದ ಚಾಲಕನಿಗೆ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಅವರು ರಸ್ತೆ ಬದಿಗೆ ಕಾರು ನಿಲ್ಲಿಸಿ ಹೊರಕ್ಕೆ ಬಂದಿದ್ದಾರೆ.
ನಂತರ ಆ ಕಾರು ಚಾಲಕ ಅಗ್ನಿಶಾಮಕಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಅಗ್ನಿ ನಂದಿಸುವ ಕಾರ್ಯ ನಡೆಸಿದರು. ಕಾರಿನ ಎಂಜಿನ್ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದ ಕಾರಣ ಕಾರಿಗೆ ಬಹಳಷ್ಟು ಹಾನಿ ಆಗಿದೆ.
ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ
ಕಳೆದ ಒಂದು ವಾರದಿಂದ ಜಿಲ್ಲೆಯ ವ್ಯಾಪ್ತಿಯಲ್ಲಿ ಬಿಸಿಲಿನ ಝಳ, ಶಾಖದ ಅಲೆ ಹೆಚ್ಚಾಗಿದೆ. ವಾಡಿಕೆಗಿಂತ ಹೆಚ್ಚಿನ ತಾಪಮಾನ (45 ಡಿಗ್ರಿ ಸೆಲ್ಸಿಯಸ್ಗೂ ಅಧಿಕ) ಕಂಡು ಬರುತ್ತಿದೆ. ಈ ಕಾರಣದಿಂದ ರೈತರು ಜಮೀನಿಗಳಿಗೆ ತೆರಳವುದು, ಮಧ್ಯಾಹ್ನ ಆಗುತ್ತಿದ್ದಂತೆ ಮನೆಯಿಂದ ಹೊರ ಬರಬಾರದು. ಆಗಾಗ ನೀರು ಕುಡಿಯಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಇಲ್ಲಿನ ಆರೋಗ್ಯಾಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.