ರಾಂಚಿ: ಲೋಕಸಭೆ ಚುನಾವಣೆ (Lok sabha Elections 2024) ವೇಳೆ ರಾಂಚಿಯಲ್ಲಿ ರಾಶಿ ರಾಶಿ ನೋಟುಗಳ (Money) ಬೆಟ್ಟವೇ ಪತ್ತೆಯಾಗಿದೆ. ಸೋಮವಾರ ರಾಂಚಿಯ ಹಲವು ಪ್ರದೇಶಗಳಲ್ಲಿ ಇಡಿ ಅಧಿಕಾರಿಗಳು (ED raids) ದಾಳಿ ನಡೆಸಿದ್ದು, ಈ ವೇಳೆ ಸಚಿರೊಬ್ಬರ ಮನೆಯಲ್ಲಿ ಕೆಲಸ ಮಾಡ್ತಿದ್ದ ಕೆಲಸಗಾರನ ನಿವಾಸದಲ್ಲಿ ಬರೋಬ್ಬರಿ 35 ಕೋಟಿ ರೂಪಾಯಿ ಹಣ ಪತ್ತೆಯಾಗಿದ್ದು, ನೋಟುಗಳ ಎಣಿಕೆ ಮುಂದುವರೆದಿದೆ.
ಅಂದಹಾಗೇ, ಈ ಹಣ ಜಾರ್ಖಂಡ್ (Jharkhand) ರಾಜ್ಯ ಸಚಿವ ಅಲಂಘಿರ್ ಆಲಂಗೆ (Alamgir Alam) ಸಂಬಂಧಿಸಿದೆ ಎಂದು ಇಡಿ ಪತ್ತೆ ಮಾಡಿದೆ. ಇದರೊಂದಿಗೆ ಅಲಂಘೀರ್ ಆಲಂ ಯಾರು ಎಂಬ ಚರ್ಚೆ ದೇಶಾದ್ಯಂತ ಜೋರಾಗಿದೆ.
ಯಾರು ಈತ ಸಚಿವ ಆಲಂಗೀರ್ ಆಲಂ?
1954 ರಲ್ಲಿ ಜನಿಸಿದ ಅಲಂಘಿರ್ 1974 ರಲ್ಲಿ ಭಾಗಲ್ಪುರ್ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿದರು. ಜಾರ್ಖಂಡ್ನ ರಾಜ್ಯದ ಪಾಕೂರ್ ಕ್ಷೇತ್ರದಿಂದ 4 ಬಾರಿ ಶಾಸಕರಾಗಿ ಗೆದ್ದಿದ್ದಾರೆ. ಸಾಹೇಬ್ ಗಂಜ್ ಜಿಲ್ಲೆಯ ನಿವಾಸಿಯಾಗಿರುವ ಆಲಂಗೀರ್ ಅವರು 2006 ರಲ್ಲಿ ರಾಜ್ಯ ವಿಧಾನಸಭಾ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 2009ರ ಚುನಾವಣೆಯಲ್ಲಿ ಸೋತಿದ್ದ ಆಲಂಗೀರ್ ಆಲಂ 2014 ಮತ್ತು 2019ರಲ್ಲಿ ಸತತವಾಗಿ ಗೆದ್ದಿದ್ದರು. ಸದ್ಯ ಅವರಿಗೆ 70 ವರ್ಷ ವಯಸ್ಸಾಗಿದೆ.
ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಸಂಪುಟದಲ್ಲಿ ಗ್ರಾಮೀಣ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಚಿ ಮುಖ್ಯ ಇಂಜಿನಿಯರ್ ವೀರೇಂದ್ರ ಕುಮಾರ್ ರಾಮ್ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಅಲಂಘಿರ್ ಹೆಸರು ಮುನ್ನೆಲೆಗೆ ಬಂದಿತ್ತು. ವೀರೇಂದ್ರಕುಮಾರ್ ಅವರು ಗುತ್ತಿಗೆದಾರರ ಬಳಿ ಕಮಿಷನ್ ಹೆಸರಿನಲ್ಲಿ ಭಾರಿ ಹಣ ಖರ್ಚು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೇಮಂತ್ ಸೋರೆನ್ ಜೈಲಿಗೆ ಹೋದ ನಂತರ ಚಂಪೈ ಸರ್ಕಾರ ರಚನೆಯಾಯಿತು. ಆ ವೇಳೆ ಆಲಂಘರ್ ಅವರನ್ನು ಉಪಮುಖ್ಯಮಂತ್ರಿ ಮಾಡುವ ಚರ್ಚೆ ಜೋರಾಗಿತ್ತು. ಅಂತಹ ಖ್ಯಾತಿ ಹೊಂದಿರುವ ಅಲಂಗೀರ್ ಇತ್ತೀಚಿನ ಇಡಿ ದಾಳಿಯಿಂದ ಸುದ್ದಿಯಲ್ಲಿದ್ದಾರೆ.
ಇನ್ನು, ದಾಳಿಯಲ್ಲಿ ಇದುವರೆಗೂ 35 ಕೋಟಿ ರೂಪಾಯಿ ಪತ್ತೆಯಾಗಿದ್ದು, ಹಣ ಸಿಕ್ಕ ಮನೆ ಜಹಾಂಗೀರ್ ಎಂಬಾತನದ್ದು ಎಂದು ಗುರುತಿಸಲಾಗಿದೆ. ಕಾರ್ಯದರ್ಶಿ ಸಂಜೀವಲಾಲ್ ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದನಂತೆ. ಈತನಿಗೆ ತಿಂಗಳಿಗೆ ಕೇವಲ 15 ಸಾವಿರ ರೂಪಾಯಿ ಮಾತ್ರ ವೇತನ ನೀಡಲಾಗುತಿತ್ತಂತೆ. ಮನೆಗೆಲಸ ಮಾಡುವವನ ಮನೆಯಲ್ಲಿ ಕೋಟ್ಯಾಂತರ ರೂಪಾಯಿಯ ಕಟ್ಟುಗಳು ಪತ್ತೆಯಾಗಿರುವುದು ಅಚ್ಚರಿ ಮೂಡಿಸಿದೆ. ಈ ಹಣವನ್ನು ಎಣಿಸಲು ಬ್ಯಾಂಕ್‌ಗಳಿಂದ ಯಂತ್ರಗಳನ್ನು ತರಿಸಲಾಗಿದೆ. ಸಚಿವ ಅಲಂಗೀರ್ ಅವರ ಕಾರ್ಯದರ್ಶಿಯಾಗಿರುವ ಸಂಜೀವ್ ಕುಮಾರ್ ಅವರು ಈ ಹಿಂದೆ ಹತ್ತು ಸಚಿವರ ಪಿಎ ಆಗಿ ಕೆಲಸ ಮಾಡಿದ್ದಾರೆ ಎಂದು ವರದಿಯಾಗಿದೆ.