ತುಮಕೂರು: ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ (ಕುಣಿಗಲ್- ಮಾಗಡಿ ಮಾರ್ಗ) ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಇಲ್ಲಿ ಸೋಮವಾರ ಆಗ್ರಹಿಸಿದರು.

ಪೈಪ್‌ಲೈನ್‌ ಮೂಲಕ ನೀರು ತೆಗೆದುಕೊಂಡು ಹೋದರೆ ತುರುವೇಕೆರೆ, ಶಿರಾ, ಮಧುಗಿರಿ, ಕೊರಟಗೆರೆ, ತುಮಕೂರು ನಗರ, ಗ್ರಾಮಾಂತರ ಭಾಗದ ಜನರಿಗೆ ಕುಡಿಯಲು ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಕೆನಾಲ್‌ ಕಾಮಗಾರಿ ಅವೈಜ್ಞಾನಿಕವಾಗಿದೆ. ನಾಲೆಯಲ್ಲಿ ನೀರು ಹರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕುಣಿಗಲ್‌ ತಾಲ್ಲೂಕಿನ ಡಿ.ರಾಂಪುರದ ಬಳಿ ಈಗಾಗಲೇ ಎಕ್ಸ್‌ಪ್ರೆಸ್‌ ಕೆನಾಲ್‌ ಕಾಮಗಾರಿ ಆರಂಭಿಸಲಾಗಿದೆ. ಕಾಮಗಾರಿ ನಿಲ್ಲಿಸಲು ಮೂರು ದಿನ ಕಾಲಾವಕಾಶ ನೀಡಲಾಗುತ್ತಿದೆ. ನಿಲ್ಲಿಸದಿದ್ದರೆ ನಾವೇ ಮುಂದೆ ನಿಂತು ಕೆನಾಲ್ ಮುಚ್ಚುತ್ತೇವೆ. ಜಿಲ್ಲೆಯ ಜನರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ, ‘ರೈತರ ಪರವಾಗಿ ಪಕ್ಷಾತೀತವಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಪಾಲಿನ 24 ಟಿಎಂಸಿ ನೀರಿನಲ್ಲೇ ರಾಮನಗರಕ್ಕೆ ಕೊಡಲು ಮುಂದಾಗಿದ್ದಾರೆ. ಇದರಿಂದ ಇಡೀ ಜಿಲ್ಲೆಗೆ ಅನ್ಯಾಯವಾಗಲಿದೆ. ಜಿಲ್ಲೆಯ ಇಬ್ಬರು ಸಚಿವರು ಜವಾಬ್ದಾರಿ ತೆಗೆದುಕೊಂಡು ಕೆನಾಲ್ ಕಾಮಗಾರಿ ನಿಲ್ಲಿಸಬೇಕು. ಇಲ್ಲದಿದ್ದರೆ ನಾವೇ ಹೋರಾಟ ರೂಪಿಸುತ್ತೇವೆ. ಮಠಾಧೀಶರು, ಸಾವಿರಾರು ಜನರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಎಕ್ಸ್‌ಪ್ರೆಸ್‌ ಕೆನಾಲ್‌ ಕಾಮಗಾರಿ ನಮ್ಮ ಜಿಲ್ಲೆಗೆ ಮಾಡುತ್ತಿರುವ ಮೋಸ. ಈಗಾಗಲೇ ನೀರಿಲ್ಲದೆ ತೆಂಗು, ಅಡಿಕೆ ಬೆಳೆ ಒಣಗುತ್ತಿವೆ. ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ. ಈ ಕಾಮಗಾರಿ ಪೂರ್ಣಗೊಳಿಸಿದರೆ ಮಧುಗಿರಿ, ಕೊರಟಗೆರೆ, ಗುಬ್ಬಿಗೆ ಒಂದು ಹನಿ ನೀರು ಸಿಗುವುದಿಲ್ಲ. ಕೂಡಲೇ ಕಾಮಗಾರಿ ನಿಲ್ಲಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಮಾಜಿ ಶಾಸಕ ಎಚ್.ನಿಂಗಪ್ಪ, ರಾಜ್ಯ ರೈತ ಸಂಘದ ಅಧ್ಯಕ್ಷ ಬಿ.ಎ.ಲಕ್ಷ್ಮಿನಾರಾಯಣಗೌಡ, ಮುಖಂಡರಾದ ಪಂಚಾಕ್ಷರಯ್ಯ, ಎಂ.ಟಿ.ಪ್ರಸನ್ನಕುಮಾರ್, ಎಸ್‌.ಡಿ.ದಿಲೀಪ್‌ಕುಮಾರ್, ಕೃಷ್ಣಪ್ಪ, ಪುಟ್ಟಯ್ಯ, ಪುರವರಮೂರ್ತಿ ಹಾಜರಿದ್ದರು.

Leave a Reply

Your email address will not be published. Required fields are marked *