ಯೋಧ್ಯೆ: ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಿಂದಾಗಿ ದೇಶದ ಗಮನಸೆಳೆದಿದ್ದ, ಉತ್ತರ ಪ್ರದೇಶದ ಧಾರ್ಮಿಕ ನಗರ ಅಯೋಧ್ಯೆಯಲ್ಲಿನ ಸ್ಥಿತಿ ಈಗ ಬದಲಾಗಿದೆ. ಅಸಂಖ್ಯ ಭಕ್ತಗಣವನ್ನು ಸೂಜಿಗಲ್ಲಿನಂತೆ ಸೆಳೆದಿದ್ದ ನಗರ ಈಗ ಭಣಗುಡುತ್ತಿದೆ.

ಅಯೋಧ್ಯೆ ನಗರದ ರಸ್ತೆಗಳು ನಿರ್ಜನವಾಗಿವೆ.

ಮುಖ್ಯವಾಗಿ ಹಗಲು ಹೊತ್ತಿನಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ಇದೆ. ಜನರು ಹೊರಗೆ ಬರಲಾಗದಷ್ಟು ಬಿಸಿಲಿನ ಪ್ರಖರತೆಯಿದೆ.

ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದಲ್ಲಿ ಪ್ರಾಣಪ್ರತಿಷ್ಠಾಪನೆ ನಡೆದ ಸಂದರ್ಭದಲ್ಲಿ ದೇಶದ ವಿವಿಧೆಡೆಯಿಂದ ಲಕ್ಷಾಂತರ ಜನರನ್ನು ಆಕರ್ಷಿಸಿದ್ದು ಇದೇ ಸ್ಥಳವೇ ಎಂಬ ಅನುಮಾನ ಮೂಡಿಸುವ ಸ್ಥಿತಿ ಪ್ರಸ್ತುತ ಈ ನಗರದಲ್ಲಿದೆ.

ಈ ನಾಲ್ಕು ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆಯು ಗಣನೀಯವಾಗಿ ಇಳಿಮುಖವಾದಂತೆ ಅಯೋಧ್ಯೆಗೆ ಸಂಪರ್ಕ ಕಲ್ಪಿಸಲು ಆರಂಭಿಸಿದ್ದ ವಿಮಾನಗಳ ಸಂಖ್ಯೆಯೂ ಕನಿಷ್ಠ ಶೇ 50ರಷ್ಟು ತಗ್ಗಿದೆ.

ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲಿ ಸೇರಿದ್ದ ಜನಸಮೂಹ, ಪ್ರಧಾನಿ ಸೇರಿದಂತೆ ಪ್ರಮುಖ ರಾಜಕಾರಣಿಗಳ ಭಾಷಣದಲ್ಲಿ ರಾಮಮಂದಿರದ ಉಲ್ಲೇಖವನ್ನು ಗಮನಿಸಿದ್ದ ಪ್ರತಿಯೊಬ್ಬರು, ಅಯೋಧ್ಯೆ ಒಳಗೊಂಡಿರುವ ಫೈಜಾಬಾದ್‌ ಲೋಕಸಭೆ ಕ್ಷೇತ್ರದ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂದೇ ಭಾವಿಸಿದ್ದರು.

ಸರ್ಕಾರವು ಫೈಜಾಬಾದ್ ಜಿಲ್ಲೆಗೆ ಅಯೋಧ್ಯೆ ಎಂದು ಮರುನಾಮಕರಣ ಮಾಡಿತ್ತು. ಆದರೆ, ಚುನಾವಣಾ ಆಯೋಗದ ದಾಖಲೆಗಳಲ್ಲಿ ಜಿಲ್ಲೆಯ ಹೆಸರು ಇನ್ನೂ ಫೈಜಾಬಾದ್ ಎಂದೇ ಉಳಿದುಕೊಂಡಿದೆ.

‘ರಾಮಮಂದಿರ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಚಿಂತಿಸುವುದು ಮೂರ್ಖತನ ಆಗುತ್ತದೆ. ಲಕ್ಷಾಂತರ ಜನರು ಬಂದು ಭವ್ಯ ರಾಮಮಂದಿರವನ್ನುಗಮನಿಸಿದ್ದಾರೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುಶೀಲ್‌ ಕುಮಾರ್ ಪಾಂಡೆ. ಆದರೆ, ಮತ್ತೊಬ್ಬ ನಿವಾಸಿ ಮಹೇಂದ್ರ ಯಾದವ್, ‘ಸ್ಥಳೀಯರು ಈಗ ಅಗತ್ಯ ವಸ್ತುಗಳ ಬೆಲೆ ಏರಿಕೆ, ಮೀಸಲಾತಿ, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಸೋರಿಕೆ ಇತ್ಯಾದಿ ವಿಷಯಗಳ ಕುರಿತು ಮಾತನಾಡುತ್ತಿದ್ದಾರೆ’ ಎಂದು ಹೇಳುತ್ತಾರೆ.

ಬಿಜೆಪಿಯು ಈ ಕ್ಷೇತ್ರದಲ್ಲಿ ಜಯಗಳಿಸಲೇಬೇಕು. ಅಯೋಧ್ಯೆಯನ್ನು ಒಳಗೊಂಡ ಕ್ಷೇತ್ರದಲ್ಲಿಯೇ ಪಕ್ಷಕ್ಕೆ ಸೋಲುಂಟಾದರೆ ಅದು ಅತಿದೊಡ್ಡ ಅವಮಾನ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಹಿಂದೆ, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಲಾಲೂ ಸಿಂಗ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ ಆನಂದ್ ಸೆನ್ ಯಾದವ್‌ ಅವರನ್ನು 65 ಸಾವಿರ ಮತಗಳಿಂದ ಪರಾಭವಗೊಳಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ನಿರ್ಮಲ್‌ ಖಾತ್ರಿ ಅವರು 53 ಸಾವಿರ ಮತಗಳನ್ನು ಪಡೆದಿದ್ದರು. ಈಗ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಮೈತ್ರಿಯಾಗಿದ್ದು, ಬಿಜೆಪಿಯಲ್ಲಿ ತುಸು ಆತಂಕ ಮೂಡಿಸಿದೆ.

ಇದರ ಜೊತೆಗೆ ಕ್ಷೇತ್ರದಲ್ಲಿ ಜಾತಿ ಸಮೀಕರಣದ ಲೆಕ್ಕಾಚಾರವು ನಡೆದಿದೆ. ಯಾದವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಸುಮಾರು 1.5 ಲಕ್ಷ ಮುಸಲ್ಮಾನರಿದ್ದರೆ, ಪರಿಶಿಷ್ಟರ ಸಂಖ್ಯೆ ಸುಮಾರು 4.5 ಲಕ್ಷ.

ರಾಜಕೀಯ ಪರಿಣತರ ಪ್ರಕಾರ, ಒಬಿಸಿ ಮತಗಳು ಮುಖ್ಯವಾಗಿ ಯಾದವ ಮತಗಳು ಕ್ಷೇತ್ರದ ಫಲಿತಾಂಶದಲ್ಲಿ ನಿರ್ಣಾಯಕವಾಗಿವೆ. ಕ್ಷೇತ್ರದಲ್ಲಿ 5ನೇ ಹಂತದಲ್ಲಿ ಮೇ 20ರಂದು ಮತದಾನ ನಡೆಯಲಿದೆ. ರಾಮಮಂದಿರ ವಿವಾದ ಮತದಾರರ ಮೇಲೆ ಪರಿಣಾಮ ಬೀರಿದೆಯಾ ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಜೂನ್‌ 4ರವರೆಗೆ ಕಾಯಬೇಕು.

Leave a Reply

Your email address will not be published. Required fields are marked *