ವದೆಹಲಿ: ಲೋಕಸಭಾ ಚುನಾವಣೆಯ ಪ್ರತಿ ಹಂತದ ಮತದಾನ ಮುಗಿದ 48 ಗಂಟೆಗಳ ನಂತರ ಮತ ಪ್ರಮಾಣದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ನೀಡಿದೆ.

ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯ ಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಸಂಜೀವ್‌ ಖನ್ನಾ ಅವರು ಇದ್ದ ನ್ಯಾಯಪೀಠ, ಒಂದು ವಾರದ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಆಯೋಗಕ್ಕೆ ಸೂಚಿಸಿದೆ.

ಮೇ 24ರಂದು ಅರ್ಜಿ ವಿಚಾರಣೆ ನಡೆಸುವುದಾಗಿಯೂ ಪೀಠ ಹೇಳಿದೆ. ಅಸೋಸಿಯೇಷನ್‌ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಎಂಬ ಎನ್‌ಜಿಒ ಈ ಕುರಿತು ಅರ್ಜಿ ಸಲ್ಲಿಸಿದೆ.

ಅರ್ಜಿ ವಿಚಾರಣೆ ವೇಳೆ, ‘ಮತ ಪ್ರಮಾಣಕ್ಕೆ ಸಂಬಂಧಿಸಿ ಫಾರ್ಮ್‌ 17ಸಿ ದತ್ತಾಂಶವನ್ನು ಬಹಿರಂಗಪಡಿಸುವುದಕ್ಕೆ ಇರುವ ನಿರ್ಬಂಧ ಏನು? ಚುನಾವಣಾ ಆಯೋಗ ಈ ಎಲ್ಲ ಮಾಹಿತಿಯನ್ನು ಬಹಿರಂಗಪಡಿಸಬೇಕು’ ಎಂದು ಆಯೋಗದ ಪರ ಹಾಜರಿದ್ದ ಹಿರಿಯ ವಕೀಲರಾದ ಮಣಿಂದರ್ ಸಿಂಗ್‌ ಹಾಗೂ ಅಮಿತ್ ಶರ್ಮಾ ಅವರನ್ನು ಉದ್ದೇಶಿಸಿ ನ್ಯಾಯಪೀಠ ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು, ‘ಈ ವಿಚಾರದಲ್ಲಿ ಯಾವುದೇ ತೊಂದರೆ ಇಲ್ಲ. ಫಾರ್ಮ್‌ 17ಸಿ ಕ್ರೋಡೀಕರಣ ಸೇರಿದಂತೆ ಇಡೀ ಪ್ರಕ್ರಿಯೆ ಪೂರ್ಣಗೊಳ್ಳಲು ಸಮಯ ಬೇಕಾಗುತ್ತದೆ’ ಎಂದು ತಿಳಿಸಿದರು.

ಎಡಿಆರ್‌ ಪರ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್‌,’ಎಲ್ಲ ಹಂತಗಳಲ್ಲಿ ಮತ ಪ್ರಮಾಣದಲ್ಲಿ ದಿಢೀರ್‌ ಹೆಚ್ಚಳ ಕಂಡುಬಂದಿದೆ’ ಎಂದು ಪೀಠಕ್ಕೆ ತಿಳಿಸಿದರು.

‘ಈ ಅರ್ಜಿಯನ್ನು 2019ರಲ್ಲಿ ಸಲ್ಲಿಸ ಲಾಗಿದ್ದು, ಆಯೋಗಕ್ಕೆ ಇದಕ್ಕೆ ವಿಸ್ತೃತ ಪ್ರತಿಕ್ರಿಯೆಯನ್ನೂ ನೀಡಿದೆ. ಆದರೆ, ಅರ್ಜಿದಾರರು ಮಾತ್ರ ಯಾವುದೇ ಪ್ರತ್ಯುತ್ತರ ನೀಡಿಲ್ಲ’ ಎಂದು ಆಯೋಗದ ಪರ ವಕೀಲರು ಹೇಳಿದರು.

‘ಮತ ಪ್ರಮಾಣ ಕುರಿತ ಮಾಹಿತಿ ಸಂಗ್ರಹಕ್ಕೆ ಸಮಯ ತಗಲುತ್ತದೆ. ಪ್ರತಿ ಮತಗಟ್ಟೆಯ ಚುನಾವಣಾ ಏಜೆಂಟ್‌ಗೆ ಈ ಮಾಹಿತಿಯ ಪ್ರತಿಯನ್ನು ಒದಗಿಸಲಾಗುತ್ತದೆ. ಒಂದು ವೇಳೆ, ಮತ ಪ್ರಮಾಣದ ಬಗ್ಗೆ ಯಾರಿಗಾದರೂ ತಕರಾರು ಇದ್ದಲ್ಲಿ ಅದು ಅಭ್ಯರ್ಥಿಗೆ ಇರುತ್ತದೆ. ಮತ ಪ್ರಮಾಣದಲ್ಲಿ ವ್ಯತ್ಯಾಸವಿದೆ ಎಂಬುದು ಕಂಡುಬಂದಲ್ಲಿ ಅಭ್ಯರ್ಥಿಗಳೇ ಚುನಾವಣಾ ತಕರಾರು ಅರ್ಜಿ ಸಲ್ಲಿಸುತ್ತಾರೆ’ ಎಂದೂ ಹೇಳಿದರು.

‘ಮತದಾನ ನಡೆಯುತ್ತಿರುವ ಈ ಹಂತದಲ್ಲಿ ಈ ರೀತಿಯ ಅರ್ಜಿಗಳನ್ನು ಸಲ್ಲಿಸುವುದರಿಂದ ಮೊದಲ ಬಾರಿಗೆ ಮತ ಹಾಕುವವರು ಸೇರಿದಂತೆ ದೊಡ್ಡ ಸಂಖ್ಯೆಯ ಮತದಾರರ ಉತ್ಸಾಹಕ್ಕೆ ತಣ್ಣೀರೆರೆಚಿದಂತಾಗುತ್ತದೆ’ ಎಂದು ಆಯೋಗದ ಪರ ವಕೀಲರು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಈ ಅರ್ಜಿ ಹಲವು ವರ್ಷಗಳಿಂದ ನ್ಯಾಯಾ ಲಯದಲ್ಲಿ ಬಾಕಿ ಇರುವ ಕಾರಣ, ಪ್ರತಿಕ್ರಿಯೆ ಸಲ್ಲಿಸಲು ಚುನಾವಣಾ ಆಯೋಗಕ್ಕೆ ಅವಕಾಶ ನೀಡಬೇಕಾಗುತ್ತದೆ. ಹೀಗಾಗಿಯೇ ಸಮಯಾವಕಾಶ ನೀಡಲಾಗಿದೆ’ ಎಂದು ಹೇಳಿದೆ.

Leave a Reply

Your email address will not be published. Required fields are marked *