ಖಟಕಚಿಂಚೋಳಿ: ಹಲವು ದಿನಗಳಿಂದ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಇದರಿಂದ ರೈತರು ಭೂಮಿ ಹದ ಮಾಡುವ ಕೆಲಸಕ್ಕೆ ಮುಂದಡಿ ಇಟ್ಟಿದ್ದಾರೆ.
ಹೋಬಳಿಯ ಚಳಕಾಪುರ, ನಾವದಗಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಕೆಲವು ರೈತರು ಭೂಮಿ ಹದ ಮಾಡಿದ್ದು ಉದ್ದು, ಹೆಸರು, ಸೋಯಾ ಸೇರಿದಂತೆ ಇನ್ನಿತರ ಬೆಳೆ ಬೆಳೆಯಲು ತಯಾರಿ ನಡೆಸುತ್ತಿದ್ದಾರೆ.
‘ಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಬಂದರೆ ರೈತರು ಬಿತ್ತನೆಯಲ್ಲಿ ತೊಡಗುತ್ತಾರೆ. ಈ ಸಮಯದಲ್ಲಿ ಬಿತ್ತನೆಯಾದರೆ ಬೆಳೆ ಹುಲುಸಾಗಿ ಬರುತ್ತದೆ. ಅಲ್ಲದೆ ಬೆಳೆಗೆ ರೋಗಗಳೂ ಕಡಿಮೆ. ಬೆಳೆ ಹುಲುಸಾಗಿ ಬೆಳೆದು ಹೆಚ್ಚು ಇಳುವರಿ ನೀಡುತ್ತದೆ’ ಎಂದು ಹಿರಿಯ ರೈತ ಧನರಾಜ ಮುತ್ತಂಗೆ ತಿಳಿಸುತ್ತಾರೆ.
‘ಕಳೆದ ಬಾರಿ ಮುಂಗಾರು ಬೆಳೆ ಬೆಳೆಯಲು ಒಂದು ತಿಂಗಳು ತಡವಾದ ಕಾರಣ ಹೆಸರು, ಉದ್ದು, ಸೋನೆ ಮಳೆಗೆ ಸಿಲುಕಿ ಬಂದ ಬೆಳೆ ಕೈಸೇರದಂತಾಯಿತು. ಮುಂಗಾರು ಮಳೆ ಬಂದಾಗ ಬಿತ್ತನೆ ಮಾಡಿದರೆ, ಸೋನೆ ಮಳೆ ಬರುವಷ್ಟರಲ್ಲಿ ಕಟಾವು ಮಾಡಿ ಬೆಳೆ ಮನೆಗೆ ತರಬಹುದು’ ಎನ್ನುತ್ತಾರೆ ರೈತ ಮುಖಂಡ ನಿರ್ಮಲಕಾಂತ ಪಾಟೀಲ.
‘ಈ ಸಮಯದಲ್ಲಿ ರೈತರು ಮಾಗಿ ಉಳುಮೆಗೆ ಮುಂದಾಗಬೇಕು. ಹೀಗೆ ಮಾಡುವುದರಿಂದ ಈ ಹಿಂದೆ ಬೆಳೆಗೆ ಕಾಡುವ ಕೀಟಗಳ ಮೊಟ್ಟೆ ಬಿಸಿಲಿಗೆ ಒಡೆಯುತ್ತವೆ. ಮುಂದೆ ಬೆಳೆಯುವ ಬೆಳೆಗೆ ಶೇ 50-70 ರೋಗ ಉಂಟಾಗುವುದನ್ನು ತಡೆಗಟ್ಟಬಹುದು. ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮತ್ತು ಬಿತ್ತನೆ ಮಾಡುವುದರಿಂದ ಮಣ್ಣಿನ ಸವಕಳಿ ನಿಲ್ಲಿಸಬಹುದು. ಭೂಮಿ ಹದ ಆದ ಮೇಲೆ ಬಿತ್ತನೆಗೂ ಮೊದಲು 15 ದಿನ ಮುಂಚೆ ತಿಪ್ಪೆಗೊಬ್ಬರವನ್ನು ಬಿಸಿಲು ಇಲ್ಲದಿದ್ದಾಗ ಭೂಮಿಗೆ ಸೇರಿಸಬೇಕು. ಕಾರಣ ತಾಪಮಾನ ಹೆಚ್ಚಾದರೆ ಕೊಟ್ಟಿಗೆ ಗೊಬ್ಬರದಲ್ಲಿ ಪೋಷಕಾಂಶಗಳು ಕಡಿಮೆಯಾಗುತ್ತವೆ’ ಎಂದು ಕೃಷಿ ವಿಜ್ಞಾನಿ ಮಲ್ಲಿಕಾರ್ಜುನ ನಿಂಗದಳ್ಳಿ ಸಲಹೆ ನೀಡಿದರು.
‘ಹೋಬಳಿಯಲ್ಲಿ ಹೆಚ್ಚಾಗಿ ಹೆಸರು, ಸೋಯಾ, ಉದ್ದು ಬೆಳೆಯಲಾಗುತ್ತದೆ. ಮುಂದಿನ ವಾರವೂ ಮಳೆ ಹೀಗೆ ಮುಂದುವರಿದರೆ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ರೈತರಿಗೆ ಅಗತ್ಯವಿರುವ ಬೀಜ, ಗೊಬ್ಬರವನ್ನು ನೀಡಲು ಸರ್ಕಾರ ಸಮರ್ಪಕ ತಯಾರಿ ನಡೆಸಬೇಕು’ ಎಂದು ಮುಖಂಡ ರಾಜಶೇಖರ ಶೇರಿಕಾರ ಆಗ್ರಹಿಸಿದರು.
ಅವಿನಾಶ ಮುತ್ತಂಗೆ ಸಾಮಾಜಿಕ ಕಾರ್ಯಕರ್ತಸರ್ಕಾರ ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಮೋಸವಾಗದಂತೆ ಗುಣಮಟ್ಟದ ಬೀಜ ಗೊಬ್ಬರವನ್ನು ವಿತರಿಸಬೇಕು. ಬೀಜ ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು