ನವದೆಹಲಿ: 2024ನೇ ಸಾಲಿನ ನೀಟ್-ಯುಜಿ ಪರೀಕ್ಷೆ ರದ್ದುಗೊಳಿಸಿ, ಮರು ಪರೀಕ್ಷೆಗೆ ಆದೇಶಿಸಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಈ ಸಂಬಂಧ ಬಿಜೆಪಿಯ ನಾಯಕ ರವಿಶಂಕರ್ ಪ್ರಸಾದ್ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಭಾರತದ ಪರೀಕ್ಷಾ ವ್ಯವಸ್ಥೆಯನ್ನೇ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವಮಾನಿಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

‘ರಾಹುಲ್ ಗಾಂಧಿ ಅವರು ಭಾರತದ ಪರೀಕ್ಷಾ ವ್ಯವಸ್ಥೆಯಲ್ಲಿ ನಂಬಿಕೆಯ ಕೊರತೆಯನ್ನು ಹೆಚ್ಚಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನ ಬಳಿಕ ಅವರು ಕ್ಷಮೆಯಾಚಿಸುತ್ತಾರೆಯೇ’ ಎಂದು ಪ್ರಶ್ನಿಸಿದ್ದಾರೆ.

ಇಡೀ ಪರೀಕ್ಷೆಯ ಪಾರದರ್ಶಕತೆಗೆ ಧಕ್ಕೆಯಾಗಿದೆ ಎಂದು ರಾಹುಲ್ ಆರೋಪಿಸಿದ್ದರು. ಆದರೆ ಪ್ರಶ್ನೆಪತ್ರಿಕೆ ವ್ಯವಸ್ಥಿತವಾಗಿ ಸೋರಿಕೆಯಾಗಿರುವುದನ್ನು ಸದ್ಯ ಲಭ್ಯವಿರುವ ದಾಖಲೆಯಲ್ಲಿರುವ ಮಾಹಿತಿಯು ಸೂಚಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ರವಿಶಂಕರ್ ಉಲ್ಲೇಖಿಸಿದ್ದಾರೆ.

ರಾಹುಲ್ ಅವರ ಹೇಳಿಕೆಯು ವಿರೋಧ ಪಕ್ಷದ ನಾಯಕನ ಘನತೆಗೆ ಧಕ್ಕೆ ತಂದಿದೆ ಎಂದು ಅವರು ಹೇಳಿದ್ದಾರೆ.

‘ಕೇಂದ್ರ ಬಜೆಟ್ ಅನ್ನು ‘ಕುರ್ಚಿ ಉಳಿಸಿಕೊಳ್ಳುವ ಬಜೆಟ್’ ಎಂಬ ರಾಹುಲ್ ಟೀಕೆಯನ್ನು ರವಿಶಂಕರ್ ಅಲ್ಲಗಳೆದಿದ್ದಾರೆ. ರಾಹುಲ್ ಹಾಗೂ ಅವರ ಪಕ್ಷವನ್ನು ಜನರು ನಿರಂತರವಾಗಿ ತಿರಸ್ಕರಿಸಿದ್ದಾರೆ’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *