ಬೆಂಗಳೂರು: ಇಂದಿನಿಂದ ರಾಜ್ಯಾದ್ಯಂತ ಸಿಇಟಿ-2024 (CET Exam 2024) ಪರೀಕ್ಷೆ ಆರಂಭಗೊಳ್ಳಲಿದೆ. ಇಂದು ಮತ್ತು ನಾಳೆ 2 ಪತ್ರಿಕೆಗಳಿಗೆ ಪರೀಕ್ಷೆ ನಡೆಯಲಿದ್ದು, ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ.
ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿದರೆ ಮಾತ್ರ ಪರೀಕ್ಷಾ ಕೇಂದ್ರದೊಳಗೆ ಹೋಗಲು ಅವಕಾಶ ನೀಡಲಾಗಿದ್ದು, ಪರೀಕ್ಷೆಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶವಾಗದಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲು ಆಯಾ ಜಿಲ್ಲಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಪರೀಕ್ಷಾ ಕೇಂದ್ರದ ಸುತ್ತಮತ್ತ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಇದರ ಜೊತೆಗೆ ಸಿಇಟಿ ಕರ್ತವ್ಯಕ್ಕೆ ಒಟ್ಟಾರೆ 20,300 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 167 ಪರೀಕ್ಷಾ ಕೇಂದ್ರಗಳಿದ್ದು, ಈ ಬಾರಿ 648 ವಿಶೇಷ ಚೇತನ ಅಭ್ಯರ್ಥಿಗಳು ಸಹ ಸಿಇಟಿ ಪರೀಕ್ಷೆಯಲ್ಲಿ ಭಾಗಿಯಾಗುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಒಂದು ಲಕ್ಷದಷ್ಟು ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗುತ್ತಿದ್ದು, ಬೆಳಿಗ್ಗೆ 10.30ಕ್ಕೆ ಮತ್ತು ಮಧ್ಯಾಹ್ನ 2.30ಕ್ಕೆ ಪರೀಕ್ಷೆ ಆರಂಭವಾಗಲಿದೆ. ಇಂದು ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆ ನಡೆಯಲಿದ್ದು, ಶುಕ್ರವಾರ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ವಿಶೇಷ ಅಂದ್ರೆ ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಪ್ರಶ್ನೆಪತ್ರಿಕೆ ಇರಲಿದೆ. ಇನ್ನು, ಏಪ್ರಿಲ್ 20ರಂದು ಹೊರನಾಡು ಕನ್ನಡಿಗರಿಗೆ ಪರೀಕ್ಷೆ ಆಯೋಜಿಸಲಾಗಿದ್ದು, ಇದೇ 20ರಂದು ಬೆಳಗಾವಿ, ಮಂಗಳೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಪರೀಕ್ಷಾರ್ಥಿಗಳಿಗೆ ಸೂಚನೆಗಳು
- ಪ್ರವೇಶಪತ್ರ ಮತ್ತು ಗುರುತಿನ ಪತ್ರದೊಂದಿಗೆ ಬರುವುದು ಕಡ್ಡಾಯ
- ನೀಲಿ ಅಥವಾ ಕಪ್ಪು ಬಣ್ಣದ ಪೆನ್ ಮಾತ್ರ ಬಳಸತಕ್ಕದ್ದು
- ತುಂಬು ತೋಳಿನ ಅಂಗಿ ಧರಿಸಿಕೊಂಡು ಬರುವಂತಿಲ್ಲ
- ಮೊಬೈಲ್, ಬ್ಲೂಟೂತ್, ಟ್ಯಾಬ್ಲೆಟ್, ಕೈಗಡಿಯಾರ, ಕ್ಯಾಲ್ಕುಲೇಟರ್, ನೋಟ್ ಪ್ಯಾಡ್, ಐ-ಪಾಡ್, ಇಯರ್ ಫೋನ್ ಇತ್ಯಾದಿ ತರುವಂತಿಲ್ಲ
- ಒಮ್ಮೆ ಉತ್ತರವನ್ನು ಗುರುತು ಮಾಡಿದ ಬಳಿಕ ಅದನ್ನು ಅಳಿಸಲು ಅವಕಾಶವಿರುವುದಿಲ್ಲ
- ಓಎಂಆರ್ ಶೀಟ್‌ನಲ್ಲಿ ಪ್ರವೇಶಪತ್ರ ಸಂಖ್ಯೆ, ಪ್ರಶ್ನೆಪತ್ರಿಕೆಯ ವರ್ಶನ್ ಕೋಡ್ ನಮೂದಿಸುವುದು ಕಡ್ಡಾಯ
- ಓಎಂಆರ್ ಶೀಟ್‌ನ ಕೆಳಭಾಗದಲ್ಲಿ ಅಭ್ಯರ್ಥಿಗಳು ಮರೆಯದೆ ಸಹಿ ಹಾಕಬೇಕು
- ಓಎಂಆರ್ ಶೀಟ್‌ನಲ್ಲಿರುವ ಟೈಮಿಂಗ್ ಮಾರ್ಕ್ ಮೇಲೆ ಏನನ್ನೂ ಬರೆಯುವುದಾಗಲಿ, ಗೀಚುವುದಾಗಲಿ ಮಾಡುವಂತಿಲ್ಲ
ದಾಖಲೆ ಪ್ರಮಾಣದಲ್ಲಿ ಅಭ್ಯರ್ಥಿಗಳು
ವಿಶೇಷ ಅಂದ್ರೆ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯುತ್ತಿದ್ದು, 2024ರ ಕರ್ನಾಟಕ ಕಾಮನ್ ಎಂಟ್ರ್ಯಾನ್ಸ್ ಟೆಸ್ಟ್ ಗೆ ದಾಖಲೆಯ 349637 ಅಭ್ಯರ್ಥಿಗಳ ನೊಂದಣಿಯಾಗಿದೆ. ಸದ್ಯ ರಾಜ್ಯದಲ್ಲಿ 737 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಂಗಳೂರಿನಲ್ಲಿಯೇ 167 ಪರೀಕ್ಷಾ ಕೇಂದ್ರಗಳನ್ನ ಗುರುತಿಸಲಾಗಿದೆ. 737 ವೀಕ್ಷಕರು, 737 ವಿಶೇಷ ಜಾಗೃತ ದಳದ ಸದಸ್ಯರು 737 ಪ್ರಶ್ನೆಪತ್ರಿಕಾ ಪಾಲಕರು, 14568 ಕೊಠಡಿ ಮೇಲ್ವಿಚಾರಕರು, 20300 ಅಧಿಕಾರಿ ವರ್ಗದವರ ನಿಯೋಜನೆ ಮಾಡಲಾಗಿದೆ.
ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರ್ನರಿ, ಫಾರ್ಮಸಿ, ನ್ಯಾಚುರೋಪಥಿ ಮತ್ತು ಯೋಗ ಹಾಗೂ ಬಿ.ಎಸ್ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಸಿಇಟಿ ಪರೀಕ್ಷೆ ನಡೆಯಲಿದ್ದು, ಎಲ್ಲ ಕೇಂದ್ರಗಳಲ್ಲೂ ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಬೆಳಿಗ್ಗೆ ಭೌತಶಾಸ್ತ್ರ ಮತ್ತು ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಬೆಳಗಾವಿ, ವಿಜಯಪುರ, ಬಳ್ಳಾರಿ ಮತ್ತು ಮಂಗಳೂರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.