ಬೆಂಗಳೂರು: ನೈಜೀರಿಯಾ ಪ್ರಜೆಗಳಿಂದ (Nigerian nationals ) ಪೊಲೀಸ್ ಸಿಬ್ಬಂದಿ (Bengaluru Police) ಮೇಲೆ ಹಲ್ಲೆ ನಡೆದಿರುವ ಘಟನೆ ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣೆಯ (Rajankunte Police Station) ಮಾವಳ್ಳಿ ಪುರದಲ್ಲಿ ನಡೆದಿದೆ. ರಾತ್ರಿ 12 ಗಂಟೆಗೆ ಸುಮಾರಿಗೆ ಘಟನೆ ನಡೆದಿದ್ದು, ಡ್ರಗ್ ಪೆಡ್ಲರ್ (Drug peddler) ಇರುವಿಕೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಪೊಲೀಸರು (CCB Police) ಪರಿಶೀಲನೆಗೆ ತೆರಳಿದ್ದರು.
ಈ ವೇಳೆ ಪೊಲೀಸರ ಮೇಲೆಯೇ ನೈಜೀರಿಯಾ ಪ್ರಜೆಗಳು ಹಲ್ಲೆ ಮಾಡಿದ್ದಾರೆ. ಪೊಲೀಸರ ಕಾರನ್ನ(Police Vehicle) ಜಖಂ ಮಾಡಿದ್ದಾರೆ. ಘಟನೆಯಲ್ಲಿ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
112ಕರೆ ಮಾಡಿದ್ದ ಸಿಸಿಬಿ ಪೊಲೀಸರು
ಘಟನೆಯಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಾವಳ್ಳಿಪುರದ ಮನೆಯೊಂದರಲ್ಲಿ ಡ್ರಗ್ಸ್ ಸೇವನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಪೊಲೀಸರು ಪರಿಶೀಲನೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾದ ನೈಜೀರಿಯಾ ಪ್ರಜೆಗಳು ಸಿಸಿಬಿ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಪರಾರಿ ಯತ್ನಿಸಿದ್ದಾರೆ. ತಕ್ಷಣ ಸಿಸಿಬಿ ಪೊಲೀಸರು 112ಗೆ ಕರೆ ಮಾಡಿದ್ದು, ಕರೆ ಮಾಡಿದ ಕೂಡಲೇ ಘಟನಾ ಸ್ಥಳಕ್ಕೆ ಬಂದ ರಾಜಾನುಕುಂಟೆ ಹೊಯ್ಸಳ ಸಿಬ್ಬಂದಿ ಆಗಮಿಸಿದ್ದಾರೆ. ಆ ವೇಳೆ ಹೊಯ್ಸಳ ಸಿಬ್ಬಂದಿ ಮೇಲೆಯೂ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.
ಕಲ್ಲು, ಕಬ್ಬಿಣದ ರಾಡ್ನಿಂದ ದಾಳಿ
ಘಟನೆಯಲ್ಲಿ ಸಿಸಿಬಿ ಪೊಲೀಸರ ಒಂದು ಜೀಪ್ ಹಾಗೂ ರಾಜಾನುಕುಂಟೆ ಪೊಲೀಸ್ ಠಾಣೆಯ ಹೊಯ್ಸಳ ಜೀಪ್ ಗಾಜು ಪುಡಿ ಪುಡಿಯಾಗಿದೆ. ಕಬ್ಬಿಣದ ರಾಡು, ಕಲ್ಲು, ಹೆಲ್ಮೆಟ್ ನಿಂದ ನೈಜೀರಿಯಾ ಪ್ರಜೆಗಳು ದಾಳಿ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಪೊಲೀಸ್ ಸಿಬ್ಬಂದಿಯ ಆರೋಗ್ಯವನ್ನು ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ವಿಚಾರಿಸಿದ್ದಾರೆ.
10ಕ್ಕೂ ಹೆಚ್ಚು ಜನರನ್ನು ಕರೆಯಿಸಿಕೊಂಡಿದ್ದ ದುಷ್ಕರ್ಮಿಗಳು
ಘಟನಾ ಸ್ಥಳಕ್ಕೆ ಭೇಟಿ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ರಾತ್ರಿ ಇಡೀ ಬೆಂ.ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ನೈಜೀರಿಯಾ ಪ್ರಜೆಗಳು ಮೊದಲು ಸುಮಾರು ಸಮಯ ನಡುರಸ್ತೆಯಲ್ಲೇ ಸಿಸಿಬಿ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಆ ಬಳಿಕ ಪೊಲೀಸರು ಅವರನ್ನು ಜೀಪ್ಗೆ ಹತ್ತಿಸುತ್ತಿದ್ದಂತೆ ಪೊಲೀಸರ ಮೇಲೆಯೇ ಅಟ್ಯಾಕ್ ಮಾಡಿದ್ದಾರೆ. ಅಲ್ಲದೇ ಪೊಲೀಸರು ಬಂದಿದ್ದನ್ನು ತಮ್ಮವರಿಗೆ ಕರೆ ಮಾಡಿ ತಿಳಿಸಿ ಸುಮಾರು ಬೈಕ್ಗಳಲ್ಲಿ 10ಕ್ಕೂ ಹೆಚ್ಚು ಮಂದಿಯನ್ನು ಸ್ಥಳಕ್ಕೆ ಕರೆಯಿಸಿಕೊಂಡು ಪೊಲೀಸ್ ವಾಹನ ಸೇರಿದಂತೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ