ಬೈಲಹೊಂಗಲ (ಬೆಳಗಾವಿ): ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ನರೇಗಾ ಕೆಲಸ ಮಾಡುತ್ತಿದ್ದ ಕಾರ್ಮಿಕ ಸೋಮವಾರ ತೀವ್ರ ಹೃದಯಾಘಾತದಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಲ್ಲೇಶ ಲಕ್ಷ್ಮಣ ಸಂಬರಗಿ (55) ಮೃತರು. ನರೇಗಾ ಯೋಜನೆಯಡಿ ಹಳ್ಳ ಹೂಳೆತ್ತುವ ಕಾಮಗಾರಿ ನಡೆದಿತ್ತು.
ಎಂದಿನಂತೆ ಸೋಮವಾರ ಕೂಡ ಮಣ್ಣು ಅಗೆಯುವ ಕೆಲಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಜತೆಯಲ್ಲಿದ್ದ ಕಾರ್ಮಿಕರು ಅವರ ಎದೆ ತಿಕ್ಕಿ, ಗಾಳಿಬೀಸಿ, ನೀರು ಕುಡಿಸಿ ಉಪಚರಿಸಲು ಯತ್ನಿಸಿದರು. ಅಷ್ಟರೊಳಗೆ ಅವರು ಉಸಿರು ನಿಲ್ಲಿಸಿದ್ದರು.
ವೈದ್ಯರು ಸ್ಥಳಕ್ಕೆ ಬಂದು ಪರಿಶೀಲಿಸಿದ ಬಳಿಕ ಬೈಲಹೊಂಗಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಲ್ಲೇಶ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ವಿಜಯ ಪಾಟೀಲ ಹೇಳಿದರು.
ಅವರಿಗೆ ಪತ್ನಿ, ಪುತ್ರ, ಮೂವರು ಪುತ್ರಿಯರು ಇದ್ದಾರೆ.