ಹಾರೋಹಳ್ಳಿ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಳಿಗೆಗಳನ್ನು ಹತ್ತಾರು ವರ್ಷದಿಂದ ಹರಾಜು ಮಾಡಿಲ್ಲ ಎಂದು ಆರೋಪಿಸಿ ದಲಿತ ಸಂಘಟನೆಗಳ ಮುಖಂಡರು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ವಿಜಿಯಣ್ಣ ಅವರಿಗೆ ಮನವಿ ನೀಡಿದರು.

ಹಾರೋಹಳ್ಳಿಯ ತಾಲ್ಲೂಕು ಕಚೇರಿಗೆ ಬುಧವಾರ ಭೇಟಿ ನೀಡಿದ ದಲಿತ ಸಂಘಟನೆಗಳ ಮುಖಂಡರು ತಹಶೀಲ್ದಾರ್ ಅವರಿಗೆ ದೂರುಗಳ ಸುರಿಮಳೆಯನ್ನೇ ಸುರಿಸಿದರು.

ಸಮತಾ ಸೈನಿಕ ದಳದ ರಾಜ್ಯ ಯುವಘಟಕದ ಅಧ್ಯಕ್ಷ ಜಿ.ಗೋವಿಂದಯ್ಯ ಮಾತನಾಡಿ, ಐದು ತಿಂಗಳ ಹಿಂದೆ ಅಂಗಡಿ ಮಳಿಗೆಗಳನ್ನು ಹರಾಜಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಅಂದು ತಹಶೀಲ್ದಾರ್ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಆದಷ್ಟು ಬೇಗ ಮಳಿಗೆಗಳನ್ನು ಹರಜು ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ ಐದು ತಿಂಗಳು ಕಳೆದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ರಸ್ತೆಯನ್ನು ಅಗಲೀಕರಣ ನಡೆಸುತ್ತೇವೆ ಎಂದು ಸುಳ್ಳು ಹೇಳಿದ ಅಧಿಕಾರಿಗಳು ನಮ್ಮ ಹೋರಾಟದ ಹಾದಿಯನ್ನು ತಪ್ಪಿಸಿದರು. ಆದರೆ ಮುಂದೆ ಹಾಗಾಗುವುದಿಲ್ಲ. ಚುನಾವಣಾ ನೀತಿ ಸಂಹಿತೆ ಮುಗಿದ ತಕ್ಷಣ ಕೂಡಲೇ ಅಂಗಡಿ ಮಳಿಗೆಗಳನ್ನು ಹರಾಜು ನಡೆಸಬೇಕೆಂದು ಒತ್ತಾಯಿಸಿದರು.

ಕಾರು ಶೋರೂಂ ತೆರವುಗೊಳಿಸಿ: ದ್ಯಾವಸಂದ್ರ ಗ್ರಾ.ಪಂ ವ್ಯಾಪ್ತಿಯ ಗಾಂಧಿ ಫಾರಂ ಬಳಿ ಕಾರು ಕಂಪನಿಯೊಂದು ಜಮೀನು ಖರೀದಿಸಿ ಅದನ್ನು ವ್ಯವಸಾಯಕ್ಕಾಗಿ ಬಳಸದೇ ಬೇರೆ ಉದ್ದೇಶಕ್ಕಾಗಿ ಬಳಸುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅದನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದರೂ ಸಹ ತಹಶೀಲ್ದಾರ್ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಆದಷ್ಟು ಬೇಗ ಗಮನಹರಿಸಬೇಕು ಎಂದರು.

ಈ ಕೂಡಲೇ ದಲಿತ ಕುಂದುಕೊರತೆ ಸಭೆಗಳನ್ನು ನಡೆಸಬೇಕು, ನೂತನ ತಾಲೂಕು ಹರೋಹಳ್ಳಿಯಲ್ಲಿ ಅಂಬೇಡ್ಕರ್ ಸಮುದಾಯ ಭವನ ಹಾಗೂ ಅಂಬೇಡ್ಕರ್ ಪ್ರತಿಮೆ ಸ್ಥಾಆಪಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಅಶೋಕ್, ಚಂದ್ರು, ಕೋಟೆ ಪ್ರಕಾಶ್, ವೆಂಕಟೇಶ್, ಬೆಣಚುಕಲ್ ದೊಡ್ಡಿ ರುದ್ರೇಶ್, ಯಡುವನಹಳ್ಳಿ ಚಂದು,ಅಂಜನೇಯ ಮೂರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *