ಶಿರಸಿ, ಮೇ. 10 : ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 473 ಅಡಿಕೆ ಬೆಳೆಗಾರರಿಗೆ 12 ಲಕ್ಷ 78 ಸಾವಿರ ವಿಮಾ ಹಣ ಹಾಗೂ 9 ಲಕ್ಷ 46 ಸಾವಿರ ನಷ್ಟ ಪರಿಹಾರ ಕೊಡಲು ಎಸ್.ಬಿ.ಆಯ್ ವಿಮಾ ಕಂಪನಿಗೆ ಆದೇಶ ನೀಡಲಾಗಿದೆ. ಶಿರಸಿಯ ನೀಲಕುಂದ, ತಂಡಾಗುಡಿ ಪ್ರದೇಶದ ಅಡಿಕೆ ಬೆಳೆಗಾರ ರೈತರು 2017-18 ರಲ್ಲಿ ಅಡಿಕೆ ಬೆಳೆಯನ್ನು ಬೆಳೆದಿದ್ದರು.

ಆ ಬೆಳೆಗೆ ರೈತರು ಕೆನರಾ ಕೋ-ಆಪ್‍ರೆಟಿವ್ ಸಂಘದೊಂದಿಗೆ ಎಸ್.ಬಿ.ಆಯ್ ವಿಮಾ ಕಂಪನಿಗೆ ತಮ್ಮ ಅಡಿಕೆ ಬೆಳೆಯನ್ನು 2017-18ರ ವರ್ಷಕ್ಕೆ ವಿಮೆ ಮಾಡಿಸಿದ್ದರು. ಮಳೆ ನಿಗದಿಗಿಂತ ಜಾಸ್ತಿಯಾಗಿ ಅತಿವೃಷ್ಠಿಯಾದರೆ ಆ ರೈತರು ವಿಮೆ ಪರಿಹಾರ ಪಡೆಯಲು ಅರ್ಹತೆ ಹೊಂದಿದ್ದರು. ಜುಲೈ 2017ರಲ್ಲಿ ತಮ್ಮ ಭಾಗದಲ್ಲಿ ಅತಿ ಹೆಚ್ಚಿನ ಮಳೆ ನಿರಂತರವಾಗಿ 4 ದಿವಸ 59 ಎಂಎಂಗಿಂತ ಹೆಚ್ಚಿನ ಮಳೆ ಆದ ಕಾರಣ ತಮ್ಮ ಅಡಿಕೆ ಬೆಳೆ ನಾಶವಾಗಿ ರೈತರಿಗೆ ಆರ್ಥಿಕ ತೊಂದರೆ ಮತ್ತು ಹಾನಿಯಾಗಿದೆ.

ವಿಮಾ ಪಾಲಸಿಯ ನಿಯಮದಂತೆ ತಮಗೆ ಬೆಳೆ ಹಾನಿ ಮತ್ತು ಪರಿಹಾರ ಕೊಡಲು 1ನೇ ಎದುರುದಾರ ಎಸ್.ಬಿ.ಆಯ್. ವಿಮಾ ಕಂಪನಿಗೆ ಹಲವು ಬಾರಿ ಕೇಳಿಕೊಂಡರೂ ಅವರು ತಮಗೆ ವಿಮಾ ಹಣ ಅಥವಾ ಪರಿಹಾರ ಕೊಟ್ಟಿಲ್ಲ. ವಿಮಾ ಕಂಪನಿ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಆಗುತ್ತದೆ ಎಂದು ಒಟ್ಟು 473 ರೈತರು ಧಾರವಾಡದ ಜನಾದೇಶ ಗ್ರಾಹಕರ ಸ್ವಯಂ ಸೇವಾ ಸಂಘದ ಮೂಲಕ ದಿನಾಂಕ 27/05/2022 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ಬಗ್ಗೆ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ವಿಶಾಲಾಕ್ಷಿ.ಅ.ಬೋಳಶೆಟ್ಟಿ ಹಾಗೂ ಪ್ರಭು .ಸಿ ಹಿರೇಮಠ ಸದಸ್ಯರು ಕೂಲಂಕುಷವಾಗಿ ವಿಚಾರಣೆ ನಡೆಸಿದರು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದವರು ದೂರುದಾರರ ಸ್ಥಳಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆ ಬಿದ್ದ ಬಗ್ಗೆ ವರದಿ ಕೊಡಬೇಕಾಗಿತ್ತು. ಆದರೆ 2017-18ನೇ ಇಸವಿಯಲ್ಲಿ 6.7 ನಷ್ಟು ಮಳೆಯಾಗಿದೆ ಅಂತಾ ವರದಿ ಕೊಟ್ಟಿದ್ದರಿಂದ ದೂರುದಾರರು ಪ್ರಕೃತಿ ವಿಕೋಪದ ಆಧಾರದಲ್ಲಿ ವಿಮೆ ಪರಿಹಾರ ಪಡೆಯಲು ಅರ್ಹರಲ್ಲ ಎಂದು 1ನೇ ಎದುರುದಾರ/ಎಸ್.ಬಿ.ಆಯ್. ವಿಮಾ ಕಂಪನಿ ಆಕ್ಷೇಪಣೆ ಎತ್ತಿದ್ದರು.

ಅತಿ ಹೆಚ್ಚು ಮಳೆಯಾಗಿದ್ದರೂ ಮಳೆ ಮಾಪನ ಕೇಂದ್ರಗಳು ಕಡಿಮೆ ಮಳೆ ಅಂತಾ ದಾಖಲಿಸಿಕೊಂಡಿದ್ದ ಪ್ರಸಂಗದಲ್ಲಿ ಅಕ್ಕಪಕ್ಕ ಮಳೆ ಮಾಪನ ಕೇಂದ್ರಗಳ ವರದಿಗಳನ್ನು ಆಧರಿಸಿ 1ನೇ ಎದುರುದಾರ ವಿಮಾ ಕಂಪನಿ ದೂರುದಾರರ ವಿಮಾ ಅರ್ಜಿಗಳನ್ನು ಪರಿಶೀಲಿಸಿ ವಿಮಾ ಹಣಕೊಡಬೇಕು ಅನ್ನುವುದು ರಾಜ್ಯ ಸರ್ಕಾರದ ನಿಯಮವಿದೆ.

ಈ ಪ್ರಕರಣದಲ್ಲಿ ಜುಲೈ-2017ರಲ್ಲಿ ದೂರುದಾರರ ಏರಿಯಾದಲ್ಲಿ ಅತೀ ಹೆಚ್ಚು ಮಳೆಯಾಗಿದೆ ಆದರೆ ತಾಂತ್ರಿಕ ದೋಷದಿಂದ ಅಲ್ಲಿಯ ಮಳೆ ಮಾಪನ ಕೇಂದ್ರದಲ್ಲಿ 6.7 ಅಂತಾ ಕಡಿಮೆ ಮಳೆ ಆಗಿದೆ ಅಂತಾ ದಾಖಲಾಗಿದೆ. ಮೇಲೆ ಹೇಳಿದ ರಾಜ್ಯ ಸರ್ಕಾರದ ನಿರ್ದೇಶನದಂತೆ ಪಕ್ಕದ ಮಳೆ ಮಾಪನ ಕೇಂದ್ರದಲ್ಲಿ 72.ಎಂಎಂಗಿಂತ ಹೆಚ್ಚು ಮಳೆಯಾದ ಬಗ್ಗೆ ದಾಖಲೆ ಇದೆ ಅದನ್ನು ಆಧರಿಸಿ ವಿಮಾ ಕಂಪನಿ ದೂರುದಾರರಿಗೆ ಬೆಳೆ ವಿಮೆ ಪರಿಹಾರ ಕೊಡಬೇಕಾಗಿತ್ತು.

ಆದರೆ, ಆ ರೀತಿ ಮಾಡದೇ ದೂರುದಾರರ ವಿಮಾ ಕೋರಿಕೆಯ ಬಗ್ಗೆ ಏನು ಹೇಳದೆ ಎದುರುದಾರ/ಎಸ್.ಬಿ.ಆಯ್ ವಿಮಾ ಸಂಸ್ಥೆ ಕರ್ತವ್ಯ ಲೋಪ ಎಸಗಿ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಒಟ್ಟು 473 ರೈತರಿದ್ದು ಅವರಿಗೆ 12 ಲಕ್ಷ 78 ಸಾವಿರ ವಿಮಾ ಹಣ ಮತ್ತು ಅದರ ಮೇಲೆ ದೂರು ದಾಖಲಾದ ದಿನಾಂಕ 27/05/2022 ರಿಂದ ಶೇ 8% ರಂತೆ ಪೂರ್ತಿ ಹಣ ಸಂದಾಯವಾಗುವವರೆಗೆ ಲೆಕ್ಕಾ ಹಾಕಿ ಕೊಡುವಂತೆ ಆಯೋಗ ಎಸ್.ಬಿ.ಆಯ್ ವಿಮಾ ಕಂಪನಿಗೆ ನಿರ್ದೇಶಿಸಿದೆ.

ಎಲ್ಲ 473 ರೈತರಿಗೆ ಆಗಿರುವ ಅನಾನುಕೂಲ ಹಾಗೂ ಮಾನಸಿಕ ಹಿಂಸೆಗಾಗಿ ತಲಾ 2,000 ರೂಪಾಯಿಯಂತೆ ಒಟ್ಟು 9 ಲಕ್ಷ 46 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆಯೋಗ ವಿಮಾ ಕಂಪನಿಗೆ ಆದೇಶಿಸಿದೆ. ಒಟ್ಟು 30 ಸಾವಿರ ರೂಪಾಯಿ ಪ್ರಕರಣಗಳ ಖರ್ಚು ವೆಚ್ಚ ನೀಡಲು ಸಹ ಆಯೋಗ ವಿಮಾ ಕಂಪನಿಗೆ ತಿಳಿಸಿದೆ.

Leave a Reply

Your email address will not be published. Required fields are marked *