ಹಾಸನ: ಗುಣಮಟ್ಟದ ಆಹಾರ ನೀಡುತ್ತಿಲ್ಲ. ಜೊತೆಗೆ ಮೂಲಸೌಕರ್ಯಗಳ ಕೊರತೆಯಿಂದ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ನಗರದ ಆಕಾಶವಾಣಿ ಹಿಂಭಾಗದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ಹಾಸ್ಟೆಲ್ನಲ್ಲಿ ನೀಡುವ ತಿಂಡಿ, ಊಟ, ಶೌಚಾಲಯ, ಕುಡಿಯುವ ನೀರು ಸಮಸ್ಯೆ ಹೆಚ್ಚಾಗಿದೆ.
ಶೀಘ್ರ ಪರಿಹಾರ ಕಲ್ಪಿಸಬೇಕು ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಬೇಕು. ಇಲ್ಲವಾದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಾಸ್ಟೆಲ್ ವಾರ್ಡನ್ ಮತ್ತು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹಾಸ್ಟೆಲ್ನಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ಸಂಜೆ ಊಟದಲ್ಲಿ ಹುಳ ಸಿಗುತ್ತದೆ. ಈ ಬಗ್ಗೆ ದೂರು ಹೇಳಲು ಹೋದರೆ ಆಧಿಕಾರಿಗಳು ಸರಿ ಮಾಡುವುದಾಗಿ ಹೇಳಿ, ಕೇವಲ ಸಬೂಬು ನೀಡುತ್ತಾರೆ ಎಂದು ಆರೋಪಿಸಿದರು.
ಸಮಸ್ಯೆ ಪರಿಹಾರಕ್ಕಾಗಿ ವಿದ್ಯಾರ್ಥಿ ಸಂಘಟನೆಗಳ ಬೆಂಬಲ ಕೋರಲಾಗಿದ್ದು, ಈ ಸಮಸ್ಯೆ ಬಗೆಹರಿಸದಿದ್ದರೇ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು. ಸಮಾಜ ಕಲ್ಯಾಣ ಇಲಾಖೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಪ್ರವೀಣ್, ಪ್ರತಾಪ್, ಸುಮನ್ ಶಿವಕುಮಾರ್, ಶರತ್, ಆಕಾಶ್, ಪ್ರೀತಮ್, ಚಿದಂಬರ್ ಭಾಗವಹಿಸಿದ್ದರು.