ಬೆಂಗಳೂರು: ‘ದೂರು ನೀಡಲು ಠಾಣೆಗೆ ಬರುವ ಜನರನ್ನು ಹೆಚ್ಚು ಕಾಯಿಸಬಾರದು. ಸುಖಾಸುಮ್ಮನೇ ಹೆಚ್ಚು ಹೊತ್ತು ಕೂರಿಸಿದ ಬಗ್ಗೆ ದೂರುಗಳು ಬಂದರೆ, ಅಂಥ ಠಾಣೆಯ ಪೊಲೀಸರ ವಿರುದ್ಧ ಕರ್ತವ್ಯಲೋಪದಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು.

ಮಾಸಿಕ ಕವಾಯತಿನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಜನರು ಠಾಣೆಗೆ ಬಂದಾಗ ತ್ವರಿತವಾಗಿ ಸ್ಪಂದಿಸಬೇಕು. ಇನ್‌ಸ್ಪೆಕ್ಟರ್ ಇಲ್ಲವೆಂದು ಹೇಳಿ ಠಾಣೆಯಲ್ಲಿ ಕೂರಿಸಬಾರದು. ಪ್ರತಿ ಠಾಣೆಯಲ್ಲಿ 8ರಿಂದ 10 ಮಂದಿ ಸಬ್‌ ಇನ್‌ಸ್ಪೆಕ್ಟರ್‌ಗಳು ಇದ್ದಾರೆ. ಅವರೆಲ್ಲರೂ ಜನರ ದೂರು ಆಲಿಸಬೇಕು’ ಎಂದು ಹೇಳಿದರು.

‘ತುರ್ತು ಸಂದರ್ಭ ಹಾಗೂ ರಕ್ಷಣೆಗಾಗಿ ಜನರು ಕರೆ ಮಾಡುತ್ತಾರೆ. ಇನ್‌ಸ್ಪೆಕ್ಟರ್‌, ಎಸಿಪಿ, ಡಿಸಿಪಿಗಳು ಪ್ರತಿಯೊಬ್ಬರ ಕರೆಗಳನ್ನು ಸ್ವೀಕರಿಸಬೇಕು. ಜನರ ಸಮಸ್ಯೆ ಆಲಿಸಿ, ಸೂಕ್ತ ಕ್ರಮ ಜರುಗಿಸಬೇಕು’ ಎಂದು ತಿಳಿಸಿದರು.

ರೌಡಿ ಚಟುವಟಿಕೆ ಹತ್ತಿಕ್ಕಲು ಸೂಚನೆ

‘ನಗರದಲ್ಲಿ ರೌಡಿ ಚಟುವಟಿಕೆಗಳು ಹೆಚ್ಚಾಗಿದೆ. ರೌಡಿಗಳು ಜನರನ್ನು ಬೆದರಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ರೌಡಿಗಳ ಕೃತ್ಯಗಳನ್ನು ಹತ್ತಿಕ್ಕಲು ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ದಯಾನಂದ್ ಸೂಚನೆ ನೀಡಿದರು.

‘ರೌಡಿಗಳ ಬಗ್ಗೆ ಹೆಚ್ಚು ನಿಗಾ ವಹಿಸಿ, ಕಾನೂನು ಕ್ರಮಗಳನ್ನು ಜರುಗಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಬೇಕು’ ಎಂದು ಹೇಳಿದರು.

Leave a Reply

Your email address will not be published. Required fields are marked *