ಟೆಹರಾನ್: ನಿನ್ನೆ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅವಘಡದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi Death News) ಅವರು ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ಮಾಧ್ಯಮಗಳು ಖಚಿತ ಪಡಿಸಿವೆ. ಈ ಹೆಲಿಕಾಪ್ಟರ್ ಅಪಘಾತದಲ್ಲಿ (Helicopter Crash) ಅವರ ಜೊತೆಗೆ ಪ್ರಯಾಣಿಸುತ್ತಿದ್ದ ವಿದೇಶಾಂಗ ಸಚಿವರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇರಾನ್ ಮಾಧ್ಯಮಗಳು ಹೇಳಿವೆ.
ಹೆಲಿಕಾಪ್ಟರ್ ಪತನವಾದ ಕೂಡಲೇ ಇರಾನ್ ಸೇನೆ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿತ್ತು. ಆದರೆ ಹೆಲಿಕಾಪ್ಟರ್ ಪತನವಾದ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಮತ್ತು ಭಾರೂ ಮಂಜಿನಿಂದಾಗಿ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದ್ದು, ಆದರೂ ಹಲವು ಗಂಟೆಗಳ ಪ್ರಯತ್ನದ ಬಳಿಕ ಹೆಲಿಕಾಪ್ಟರ್‌ನ ಅವಶೇಷಗಳು ಪತ್ತೆಯಾಗಿವೆ. ಈ ಹೆಲಿಕಾಪ್ಟರ್‌ನಲ್ಲಿ ಪಯಣಿಸುತ್ತಿದ್ದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವರು ಮತ್ತು ಇತರ ಅಧಿಕಾರಿಗಳು ಸಜೀವ ದಹನವಾಗಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್, ಅಜೆರ್ಬೈಜಾನ್‌ನ ದಟ್ಟವಾದ ಪರ್ವತ ಪ್ರದೇಶದಲ್ಲಿ ಸಾಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿತ್ತು. ಈ ವೇಳೆ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವರು ಮತ್ತು ಇತರ ಅಧಿಕಾರಿಗಳು ಈ ಹೆಲಿಕಾಪ್ಟರ್‌ನಲ್ಲಿದ್ದರು. ಅಪಘಾತ ನಡೆದ ಕೂಡಲೇ ದೊಡ್ಡ ಪ್ರಮಾಣದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು.
ಸದ್ಯ ರಕ್ಷಣಾ ತಂಡಗಳು ಅಪಘಾತದ ಸ್ಥಳ ಮತ್ತು ಹೆಲಿಕಾಪ್ಟರ್‌ನ ಅವಶೇಷಗಳನ್ನು ಕಂಡು ಹಿಡಿದಿದೆ ಎಂದು ಇರಾನ್ ರೆಡ್ ಕ್ರೆಸೆಂಟ್ ಮುಖ್ಯಸ್ಥರು ತಿಳಿಸಿದ್ದಾರೆ. ನಾವು ರಕ್ಷಣಾ ತಂಡಗಳಿಂದ ವೀಡಿಯೊಗಳನ್ನು ಸ್ವೀಕರಿಸಿದ್ದೇವೆ. ಹೆಲಿಕಾಪ್ಟರ್‌ನ ಸಂಪೂರ್ಣ ಕ್ಯಾಬಿನ್ ಕೆಟ್ಟದಾಗಿ ಹಾನಿಗೊಳಗಾಗಿದೆ ಮತ್ತು ಸುಟ್ಟುಹೋಗಿದೆ ಎಂದು ಅವರು ಹೇಳುತ್ತಾರೆ. ಮತ್ತು ಪ್ರಸ್ತುತ ಹೆಲಿಕಾಪ್ಟರ್‌ನಲ್ಲಿದ್ದವರು ಬದುಕುಳಿದ ಯಾವುದೇ ಲಕ್ಷಣಗಳಿಲ್ಲ ಎಂದು ಇರಾನ್ ರೆಡ್ ಕ್ರೆಸೆಂಟ್ ಮುಖ್ಯಸ್ಥರು ಹೇಳಿದ್ದಾರೆ.
ಅದೇ ಸಮಯದಲ್ಲಿ, ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವರು ಮತ್ತು ಇತರ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಅಪಘಾತಗೊಂಡ ಸ್ಥಳದಲ್ಲಿ ಯಾರೂ ಜೀವಂತವಾಗಿ ಕಂಡುಬಂದಿಲ್ಲ ಎಂದು ಇರಾನ್ ರಾಜ್ಯ ಸುದ್ದಿ ಸಂಸ್ಥೆ IRINN ಮತ್ತು ಅರೆ-ಅಧಿಕೃತ ಸುದ್ದಿ ಸಂಸ್ಥೆ ಮೆಹರ್ ನ್ಯೂಸ್ ವರದಿ ಮಾಡಿದೆ.
ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಇರಾನ್‌ನ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ನಂತರ ಹೆಲಿಕಾಪ್ಟರ್‌ನ ಹಾರ್ಡ್ ಲ್ಯಾಂಡಿಂಗ್ ಘಟನೆಯು ಇರಾನ್‌ನ ರಾಜಧಾನಿ ಟೆಹ್ರಾನ್‌ನ ವಾಯುವ್ಯಕ್ಕೆ ಸುಮಾರು 600 ಕಿಲೋಮೀಟರ್ (375 ಮೈಲುಗಳು) ದೂರದಲ್ಲಿರುವ ಅಜರ್‌ಬೈಜಾನ್ ಗಡಿಯಲ್ಲಿರುವ ಜುಲ್ಫಾ ನಗರದ ಬಳಿ ಸಂಭವಿಸಿದೆ.
ಸರ್ಕಾರಿ ಸುದ್ದಿ ಸಂಸ್ಥೆ ‘ಐಆರ್‌ಎನ್‌ಎ’ಯ ವರದಿ ಪ್ರಕಾರ, ಇರಾನ್‌ನ ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ಡೊಲ್ಲಾಹಿಯಾನ್, ಇರಾನ್‌ನ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದ ಗವರ್ನರ್ ಮತ್ತು ಇತರ ಅಧಿಕಾರಿಗಳು ಮತ್ತು ಅಂಗರಕ್ಷಕರು ಸಹ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿಯೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ವರದಿ ಮಾಡಿದೆ. ಬೆಂಗಾವಲು ಪಡೆಯಲ್ಲಿ ಮೂರು ಹೆಲಿಕಾಪ್ಟರ್‌ಗಳು ಪಯಣಿಸುತ್ತಿದ್ದವು. ಆ ಪೈಕಿ ಎರಡು ಹಿಂತಿರುಗಿದೆ ಎಂದು ತಿಳಿದು ಬಂದಿದೆ.
ಅಜೆರ್ಬೈಜಾನಿ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರೊಂದಿಗೆ ಅಣೆಕಟ್ಟನ್ನು ಉದ್ಘಾಟಿಸಲು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಮೇ 19 ರಂದು ಬೆಳಿಗ್ಗೆ ಅಜೆರ್ಬೈಜಾನ್‌ಗೆ ಹೊರಟಿದ್ದರು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ, ಇದು ಎರಡು ದೇಶಗಳು ಅರಸ್ ನದಿಗೆ ನಿರ್ಮಿಸಿದ ಮೂರನೇ ಅಣೆಕಟ್ಟಾಗಿದೆ. ಮಶಾದ್ ನಗರದ ಇಮಾಮ್ ರೆಜಾ ಪ್ರಾರ್ಥನಾ ಮಂದಿರದಲ್ಲಿ, ಹಾಗೆಯೇ ಕೋಮ್ ಮತ್ತು ದೇಶಾದ್ಯಂತದ ಇತರ ಸ್ಥಳಗಳಲ್ಲಿ ಜನರು ಅಧ್ಯಕ್ಷರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿರುವುದನ್ನು ತೋರಿಸುವ ಫೋಟೋಗಳನ್ನು ರಾಜ್ಯ ಟಿವಿ ಪ್ರಸಾರ ಮಾಡಿದೆ.
63 ವರ್ಷದ ಇಬ್ರಾಹಿಂ ರೈಸಿ ರೈಸಿ ಅವರು ಆಮೂಲಾಗ್ರ ಇಮೇಜ್ ಹೊಂದಿರುವ ನಾಯಕರಾಗಿದ್ದು, ಅವರು ಈ ಹಿಂದೆ ದೇಶದ ನ್ಯಾಯಾಂಗದ ಮುಖ್ಯಸ್ಥರಾಗಿದ್ದರು. ಅವರು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರಿಗೆ ಹತ್ತಿರವಾಗಿದ್ದರು. ಇರಾನ್‌ನ 2021 ರ ಅಧ್ಯಕ್ಷೀಯ ಚುನಾವಣೆಯಲ್ಲಿ ರೈಸಿ ಗೆದ್ದಿದ್ದರು.