ಬಾಗಲಕೋಟೆ : ಸನಾದಿ ಅಪ್ಪಣ್ಣ ಅವರ ಸಾಧನೆ, ಅವರ ಸನಾದಿ ವಾದನ ಎಷ್ಟು ಖ್ಯಾತಿ ಪಡೆದಿತ್ತು ಎನ್ನುವುದಕ್ಕೆ ರಾಜಕುಮಾರ ಅವರ ಸನಾದಿ ಅಪ್ಪಣ್ಣ ಚಿತ್ರ ಸಾಕ್ಷಿ. ಸನಾದಿ ಅಪ್ಪಣ್ಣ(ಸನಾದಿ ಅಪ್ಪಣ್ಣ) ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿಯವರು. ಅಲ್ಲಿ ಅವರ ಸಮಾಧಿಯು ಹೊರವಲಯದಲ್ಲಿದೆ. ಆದರೆ, ಅವರಿಗೆ ಸರಕಾರದಿಂದ ಸಿಗಬೇಕಾದ ಗೌರವ ಮಾತ್ರ ಸರಿಯಾಗಿ ಸಿಕ್ಕಿಲ್ಲ ಎಂಬುದು ಬೇಸರದ ಸಂಗತಿ. ಸನಾದಿ ಅಪ್ಪಣ್ಣ ಅವರ ವಂಶಸ್ಥರು ಬೀಳಗಿಯಲ್ಲಿ ನೆಲೆಸಿದ್ದು, ಅವರ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೊರಟಿದ್ದಾರೆ. ಸನಾದಿ ಅಪ್ಪಣ್ಣ ಅವರ ನಾಲ್ಕನೇ ತಲೆಮಾರಿನ ಕುಡಿ ಪುಟ್ಟರಾಜ ಭಜಂತ್ರಿ ಅವರು ಶಹನಾಯಿ ಬಗ್ಗೆ ಪಿ ಹೆಚ್ ಡಿ ಮಾಡಿದ್ದಾರೆ.”ಶಹನಾಯಿ ವಾದನದಲ್ಲಿ ಖಯಾಲ್ ಗಾಯನದ ಪ್ರಭಾವ”ಪ್ರಬಂಧ ರಚಿಸಿ 2023 ರಲ್ಲಿ ಪಿ ಹೆಚ್ ಡಿ ಪಡೆದಿದ್ದಾರೆ. ಆ ಮೂಲಕ ಶಹನಾಯಿ ವಾದನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿದಿದೆ.

ಸನಾದಿ ಅಪ್ಪಣ್ಣ
ಸನಾದಿ ಅಪ್ಪಣ್ಣ

ಸನಾದಿ ಅಪ್ಪಣ್ಣ ಅವರನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಅವರ ಸಮಾಧಿ ಬಿಟ್ಟರೆ ಸ್ಮಾರಕ ಮಾಡಿಲ್ಲ. ಆ ಜಾಗವನ್ನು ಒಂದು ಪ್ರವಾಸಿ ತಾಣವನ್ನಾಗಿ ಮಾಡುವ ಐತಿಹಾಸಿಕ ಸ್ಥಳ ಮಾಡುವ ಕಾರ್ಯ ಮಾಡಿಲ್ಲ. ಸ್ಥಳದಲ್ಲಿ ಕಸ-ಕಂಟಿಗಳು ಬೆಳೆದು ನಿಂತಿವೆ. ಇನ್ನು ಸನಾದಿ ಅಪ್ಪಣ್ಣ ಅವರ ನಂತರ ಕುಟುಂಬಸ್ಥರು ಶಹನಾಯಿ ವಾದನ ಕಲೆ ಪ್ರಚುರಪಡಿಸುತ್ತಾ ಹೊರಟಿದ್ದಾರೆ. ಇಡೀ ಕುಟುಂಬಸ್ಥರು ಶಹನಾಯಿ ನುಡಿಸುವ ಕಾರ್ಯ ಮಾಡುತ್ತಾರೆ. ಇಲ್ಲಿ ಪುಟ್ಟರಾಜ ತಂದೆ ಬಸವಂತಪ್ಪ ಕೂಡ ಶಹನಾಯಿ ವಾದಕ. ಪುಟ್ಟರಾಜ ಅವರ ತಮ್ಮ ಮುತ್ತಾತ ಸನಾದಿ ಅಪ್ಪಣ್ಣ ಅವರ ಬಗ್ಗೆ ಅತಿ ಹೆಚ್ಚು ಅಭಿಮಾನ ಹೊಂದಿದ್ದಾರೆ. ಸಂಗೀತದಲ್ಲಿ ಎಂಎ ಪದವಿ ಪಡೆದಿದ್ದಾರೆ. ಗದಗಿನ ಪುಟ್ಟರಾಜ ಸಂಗೀತ ಶಾಲೆಯಲ್ಲಿ ಸಂಗೀತ ಅಭ್ಯಾಸ ಮಾಡಿದ್ದಾರೆ.

ಸನಾದಿ ಅಪ್ಪಣ್ಣ ಅವರ ಸಮಾಧಿ
ಸನಾದಿ ಅಪ್ಪಣ್ಣ ಅವರ ಸಮಾಧಿ

ಹೊರ ರಾಜ್ಯದಲ್ಲೂ ಶಹನಾಯಿ ಕಾರ್ಯಕ್ರಮ ಸನಾದಿ ಅಪ್ಪಣ್ಣ ಅವರ ಸನಾದಿ ವಾದನ ಕಲೆ ಎಂದೂ ನಶಿಸಬಾರದು. ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿ ಇವರ ಮತ್ತಷ್ಟು ಎತ್ತರಕ್ಕೆ ಹಾರಿಸಬೇಕೆಂಬುದು ಉದ್ದೇಶ. ಇನ್ನು ತಂದೆ ಬಸವಂತಪ್ಪ, ಮಗ ಪುಟ್ಟರಾಜ ರಾಜ್ಯ ಪರರಾಜ್ಯದಲ್ಲೂ ಶಹನಾಯಿ ಕಾರ್ಯಕ್ರಮವಿದೆ. ಆ ಮೂಲಕ ಎಲ್ಲರಿಂದಲೂ’ ಮೆಚ್ಚುಗೆ ಪಡೆದಿದ್ದಾರೆ. ಇವರು ಶಹನಾಯಿ ವಾದನ ಉಳಿಸುವುದರ ಜೊತೆಗೆ ಸನಾದಿ ಅಪ್ಪಣ್ಣ ಅವರ ಹೆಸರನ್ನು ಸದಾ ಬದುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸನಾದಿ ಅಪ್ಪಣ್ಣ ಅವರ ವಂಶಸ್ಥರು ಎಂಬದೇ ಇವರಿಗೆ ಹೆಮ್ಮೆ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಶಹನಾಯಿ ಸಂಗೀತ ಕಲಿಸಬೇಕು. ಆ ಬಗ್ಗೆ ಪಾಠ ಮಾಡಬೇಕು. ಆ ಮೂಲಕ ಶಹನಾಯಿಗೆ ಹೆಚ್ಚು ಆಧ್ಯತೆ ಎಂಬುದು ಅವರ ಆಗ್ರಹವಾಗಿದೆ.

ಸನಾದಿ ಅಪ್ಪಣ್ಣ ಅವರ ವಂಶಸ್ಥರು ಶಹನಾಯಿ ಹಾಗೂ ಅಪ್ಪಣ್ಣ ಹೆಸರು ಉಳಿವಿಕೆಗಾಗಿ ಆದ ಪ್ರಯತ್ನ ಮಾಡುತ್ತಿದ್ದಾರೆ. ಸರಕಾರ ಇವರಿಗೆ ಕೈ ಜೋಡಿಸಿ ಶಹನಾಯಿ ಕಲೆ ಹಾಗೂ ಅಪ್ಪಣ್ಣ ಅವರ ಹೆಸರು ಅಜರಾಮರವಾಗಿಸುವ ಪ್ರಮುಖ ಪ್ರಮುಖ ಕಾರ್ಯ ಮಾಡಬೇಕಾಗಿದೆ.

Leave a Reply

Your email address will not be published. Required fields are marked *